Advertisement

ಭಟ್ಕಳ: ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ, ಆತಂಕದಲ್ಲಿ ಜನತೆ

06:12 PM May 19, 2022 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಣೆ ಮಾಡಿದ್ದರೂ ಸಹ ಬುಧವಾರ ಸಾಧಾರಣ ಮಳೆಯಾಗಿದ್ದು ಯಾವುದೇ ರೀತಿಯ ಹಾನಿ ಸಂಭವಿಸಿರಲಿಲ್ಲ. ಆದರೆ ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಮಳೆ ತೀವ್ರವಾಗಿ ಸುರಿಯಲಾರಂಭಿಸಿದ್ದು ಅನೇಕ ಕಡೆಗಳಲ್ಲಿ ಅಪಾಯದ ಗಂಟೆ ಭಾರಿಸುತ್ತಿದೆ.

Advertisement

ಭಟ್ಕಳ ತಾಲೂಕಿನಲ್ಲಿ ಮೇ.19ರ ಬೆಳಿಗ್ಗೆ 11 ಗಂಟೆಯ ತನಕ ಕೇವಲ 11 ಮಿ.ಮಿ. ಮಳೆಯಾಗಿದ್ದು ನಂತರ ಜೋರಾದ ಮಳೆಯ ಪ್ರಭಾವ ಮಧ್ಯಾಹ್ನದ ಸಮಯ ತೀವ್ರಗತಿಯನ್ನು ಪಡೆದುಕೊಂಡಿದ್ದು ಹೆಚ್ಚಿನ ಕಡೆಗಳಲ್ಲಿ ನೀರು ತುಂಬಿಕೊಂಡಿದೆ. ತಾಲೂಕಿನ ಅನೇಕ ಭಾಗದಲ್ಲಿ ಜಮೀನುಗಳಲ್ಲಿ ನೀರು ತುಂಬಿಕೊಂಡಿದ್ದರೆ ಸಂಜೆಯಾಗುತ್ತಲೇ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚು ಮಳೆ ಸುರಿಯಲಾರಂಭಿಸಿದ್ದು ಜನತೆ ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ. ಅನೇಕ ಕಡೆಗಳಲ್ಲಿ ಜನತೆ ಹೊಸ ಮನೆ ಕಟ್ಟುವುದು, ಹಳೆ ಮನೆಗಳನ್ನು ರಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದು ಧಾರಾಕಾರ ಮಳೆ ಸುರಿಯುತ್ತಿದ್ದುದರಿಂದ ಅಲ್ಲಲ್ಲಿ ಹಾಕಿದ್ದ ಮಣ್ಣು, ಜಲ್ಲಿ, ಮರಳು, ಸಿಮೆಂಟ್ ಎಲ್ಲವೂ ಜಲಾವೃತವಾಗಿ ನಷ್ಟ ಸಂಭವಿಸುವಂತೆ ಮಾಡಿದೆ. ಹಲವು ಮನೆಗಳ ರಿಪೇರಿಗೆಂದು ತಯಾರಿ ಮಾಡಿಕೊಂಡಿದ್ದರೆ, ಮಳೆಯಿಂದಾಗಿ ಇನ್ನಷ್ಟು ವಿಳಂಭವಾಗುವ ಸಾಧ್ಯತೆ ಇದೆ. ಮಳೆಯ ತೀವ್ರತೆಯಿಂದಾಗಿ ಕೂಲಿ ಕೆಲಸಕ್ಕೆ ಹೋದವರು ವಾಪಾಸು ಬಂದಿದ್ದು ಒಂದು ದಿನದ ಕೂಲಿ ಸಹಿತ ಇಲ್ಲವಾದಂತಾಗಿದೆ.

ಶಿರಾಲಿ, ಬೇಂಗ್ರೆ, ಮಾವಿನಕಟ್ಟೆ ಕಡೆಗಳಲ್ಲಿ ಹಲವು ರೈತರು ಗದ್ದೆಗೆ ಬೀಜ ಬಿತ್ತನೆ ಮಾಡಿದ್ದು ಅಧಿಕ ಮಳೆಯಾಗಿರುವುದರಿಂದ ಬೀಜ ಮೊಳೆಕೆಯೊಡಿಯುವ ಕುರಿತು ರೈತರು ಚಿಂತಿತರಾಗಿದ್ದಾರೆ. ಇನ್ನು 2-3 ದಿನಗಳ ಕಾಲ ಇದೇ ರೀತಿಯಾಗಿ ಮಳೆ ಮುಂದುವರಿದರೆ ಈ ಭಾಗರ ರೈತರು ಮತ್ತೆ ಬೀಜ ಬಿತ್ತನೆ ಮಾಡಬೇಕಾಗ ಬಹುದು ಎನ್ನುವ ಚಿಂತೆಯಲ್ಲಿದ್ದಾರೆ.

ಈಗಾಗಲೇ ಅಕಾಲಿಕವಾಗಿ ಸಾಕಷ್ಟು ಮಳೆ ಬಂದಿದ್ದು ಇನ್ನೇನು ಮುಂಗಾರು ಕೂಡಾ ಆರಂಭವಾಗುವುದರಿಂದ ಮತ್ತೆ ಬೀಜ ಬಿತ್ತನೆ ಕಾರ್ಯಕ್ಕೂ ತೊಂದರೆಯಾಗುವ ಸಾಧ್ಯತೆ ಇದ್ದು, ಇದರಿಂದ ತೋಟಗಾರಿಕಾ ಬೆಳೆಗಳಿಗೂ ಕೂಡಾ ಹಾನಿಯಾಗುವ ಸಂಭವ ಇದೆ. ತಾಲೂಕಿನಾದ್ಯಂತ ಮಲ್ಲಿಗೆ ಬೆಳೆಗಾರರು ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಬೆಳೆ ಬೆಳೆದರೂ ಮಾರಾಟವೇ ಇಲ್ಲದೇ ಕೈಚೆಲ್ಲಿ ಕುಳಿತಿದ್ದರೆ, ಈ ವರ್ಷವಾದರೂ ಸ್ವಲ್ಪ ಹೂವು ಮಾರಾಟದಿಂದ ಹಣ ಬರುವ ನಿರೀಕ್ಷೆ ಇದ್ದರೂ ಸಹ ಅಕಾಲಿಕ ಮಳೆಯಿಂದ ಹೂವು ಬೆಳೆಯೂ ಕಡಿಮೆಯಾಗಿದ್ದು ಮಾರಾಟ ಮಾಡುವುದೇ ಕಷ್ಟವಾಗಿದೆ. ಹೂವುಗಳನ್ನು ಸಕಾಲಕ್ಕೆ ಕೊಯ್ಯುವುದು ಹೂ ಕಟ್ಟುವುದು, ಮಾರುಕಟ್ಟೆ ತಲುಪಿಸುವುದೇ ಕಷ್ಟಕರವಾಗಿದ್ದು ಈ ವರ್ಷವೂ ಕೂಡಾ ಉತ್ಪನ್ನಕ್ಕೆ ಸಂಚಕಾರ ಬಿದ್ದಂತಾಗಿದೆ.

Advertisement

ಹಾನಿ: ಭಟ್ಕಳ ತಾಲೂಕಿನಲ್ಲಿ ಇಲ್ಲಿಯ ತನಕ 173.6 ಮಿ.ಮಿ. ಮಳೆಯಾಗಿದ್ದು ಮಾವಳ್ಳಿಯಲ್ಲಿ 1, ಬೇಂಗ್ರೆಯಲ್ಲಿ1 ಹಾಗೂ ಬೈಲೂರಿನಲ್ಲಿ 1 ಹೀಗೆ ಒಟ್ಟೂ 3 ಮನೆಗಳಿಗೆ ಭಾಗಶ: ಹಾನಿಯಾಗಿರುವ ಕುರಿತು ವರದಿಯಾಗಿದೆ. ಅಕಾಲಿಕ ಮಳೆಗೆ ಗ್ರಾಮೀಣ ರಸ್ತೆಗಳು ಕೆಲವು ಕಡೆಗಳಲ್ಲಿ ಗುಂಡಿ ಬಿದ್ದು ಹಾನಿಯಾಗಿದ್ದು ಇನ್ನೂ ಕೆಲವು ಕಡೆಗಳಲ್ಲಿ ರಸ್ತೆಗಳಲ್ಲಿ ಕೆಸರು ತುಂಬಿಕೊಂಡು ಓಡಾಡುವುದೇ ಕಷ್ಟ ಎನ್ನುವಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next