ಭಟ್ಕಳ: ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಶಿರಾಲಿ ಸಾರದಹೊಳೆಯ ಹಳೇಕೋಟೆ ಶ್ರೀ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಫೆಬ್ರವರಿ 8 ರಿಂದ 14ರ ತನಕ ಶ್ರೀದೇವರ ಪುನರ್ ಪ್ರತಿಷ್ಟಾಪನೆಯೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ ಗುಮ್ಮನಹಕ್ಲ ಶುಕ್ರವಾರ ಹೇಳಿದರು.
ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪುನರ್ ಪ್ರತಿಷ್ಟಾಪನಾ ಕಾರ್ಯದ ನಿಮಿತ್ತ ಫೆ.8ರಂದು ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭಟ್ಕಳದಿಂದ ಪುರಮೆರವಣಿಗೆಯ ಮೂಲಕ ಕರೆ ತರುವುದು. 9ರಂದು ಧಾರ್ಮಿಕ ಕಾರ್ಯಕ್ರಮಗಳು, ಫೆ.10ರಂದು ಶ್ರೀ ದೇವರ ಪುನರ್ ಪ್ರತಿಷ್ಟಾಪನೆ, ಫೆ.12, 13ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಫೆ.14ರಂದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದೂ ತಿಳಿಸಿದರು.
ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ ದೇವಸ್ಥಾನದ ಕಟ್ಟಡದ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದ್ದು ಒಟ್ಟೂ 5.5 ಕೋಟಿ ರೂಪಾಯಿಗಳ ಕಾಮಗಾರಿಯಾಗಿದೆ. ಸರಕಾರದಿಂದ ಒಂದು ಕೋಟಿ ರೂಪಾಯಿ ಮಂಜೂರಿಯಾಗಿದ್ದು ಬಿಡುಗಡೆಯ ಹಂತದಲ್ಲಿದೆ. ಮುಜರಾಯಿ ಇಲಾಖೆಯಿಂದ 20 ಲಕ್ಷ ರೂಪಾಯಿ ಮಂಜೂರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಧನ ಸಹಾಯ ದೊರೆಯುವ ಭರವಸೆಯಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಈಗಾಗಲೇ 2 ಲಕ್ಷ ರೂಪಾಯಿ ನೀಡಲಾಗಿದ್ದು ಪ್ರಸ್ತುತ ಭಟ್ಕಳ ತಾಲೂಕ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಂದ್ರಹಾಸ ಅವರಲ್ಲಿ 3 ಲಕ್ಷ ರೂಪಾಯಿಗಳ ಚೆಕ್ ಕಳುಹಿಸಿದ್ದಾರೆ ಎಂದರು.
ದೇವಸ್ಥಾನದ ಪುನರ್ ಪ್ರತಿಷ್ಟಾಪನೆ ಹಾಗೂ ಮುಂದಿನ ಕಾರ್ಯಕ್ರಮದಲ್ಲಿ ಒಂದು ದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸೇರಿದಂತೆ ಸಚಿವರು, ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಹಳೇಕೋಟೆ ಹನುಮಂತ ದೇವರ ದರ್ಶನ ಪಡೆಯಲಿದ್ದಾರೆ ಎಂದೂ ಅವರು ಹೇಳಿದರು.
ದೇವಸ್ಥಾನದ ಜೀರ್ಣೋದ್ಧಾ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಮಾತನಾಡಿ ಫೆ.8ರಿಂದ ಪ್ರತಿ ದಿನ ಅನ್ನ ಸಂತರ್ಪಣೆಯನ್ನು ಹಮ್ಮಿಕೊಂಡಿದ್ದು ಒಟ್ಟೂ 15 ಸಾವಿರ ಜನರು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದೂ ಹೇಳಿದರು. ಈ ಭಾಗದ ಎಲ್ಲಾ ಸಮುದಾಯದವರೂ ಕೂಡಾ ಶ್ರೀ ದೇವರ ಪುನರ್ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಸುಬ್ರಾಯ ನಾಯ್ಕ ಕಾಯ್ಕಿಣಿ, ಜೆ.ಜೆ. ನಾಯ್ಕ, ಗೌರೀಶ ನಾಯ್ಕ ವೆಂಕಟೇಶ ನಾಯ್ಕ ಶಿರಾಲಿ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.