ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವುದನ್ನು ನಿಲ್ಲಿಸಿದ್ದರಿಂದ ಅನೇಕ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಅವರು ಇಂದು ರಸ್ತೆ ಬದಿಯಲ್ಲಿ ಪಕೋಡ ಮಾರಿ ಜೀವನ ಸಾಗಿಸುತ್ತಿದ್ದಾರೆ ಎಂದು ಬಿಂಬಿಸುವ ಅಣುಕು ಪ್ರದರ್ಶನ ಮೊಗೇರ ಸಮಾದ ಧರಣಿ ಸತ್ಯಾಗ್ರಹದ ಭಾಗವಾಗಿ ಪ್ರದರ್ಶಿಸಲಾಯಿತು.
ಮೊಗೇರ ಸಮಾಜದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಸಮಾಜದ ಕೆಲ ನಿರುದ್ಯೋಗಿ ಯುವಕರು ಶುಕ್ರವಾರ ಪಕೋಡಾ, ಬೋಂಡಾ, ಮಿರ್ಚಿಬಜೆ ಮಾಡಿ ಮಾರಾಟ ಮಾಡುವುದರ ಮೂಲಕ ತಮಗಾಗಿರುವ ಅನ್ಯಾಯದ ವಿರುದ್ಧ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಮೊಗೇರ ನನ್ನ ಸಹೋದರ ಶಿಕ್ಷಣ ಕಲಿತಿದ್ದಾನೆ. ಆದರೆ ಮೊಗೇರರಿಗೆ ಈ ಹಿಂದೆ ನೀಡಲಾಗುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸರಕಾರ ಸ್ಥಗಿತಗೊಳಿಸಿದ್ದರಿಂದ ಆತನಿಗೆ ಸಿಂಧುತ್ವ ಪ್ರಮಾಣ ಪತ್ರ ಸಿಗದೇ ಸರಕಾರಿ ಉದ್ಯೋಗಕ್ಕೆ ಹೋಗಲು ಆಗಿಲ್ಲ. ಹೀಗಾಗಿ ನಾವು ಸ್ವ ಉದ್ಯೋಗ ಮಾಡಿಕೊಂಡು ಪಕೋಡಾ ಮಾರಿ ಜೀವನ ಸಾಗಿಸುತ್ತೇವೆ ಎಂದರು.
ಇದನ್ನೂ ಓದಿ:ಹಿಂದುತ್ವದ ವಿನಾಶ ಮಾಡುತ್ತಿರುವ ‘ನಕಲಿ’ಗಳ ಮಾತು ನಂಬಬೇಡಿ: ಜನತೆಗೆ ಎಚ್ ಡಿಕೆ ಕರೆ
ಸಮಾಜದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನರು ಉನ್ನತ ಶಿಕ್ಷಣ ಕಲಿತಿದ್ದರೂ ಜಾತಿ ಪ್ರಮಾಣ ಪತ್ರ ರದ್ದತಿಯಿಂದ ಸರಕಾರಿ ಉದ್ಯೋಗ ಮಾಡಲು ಹಿನ್ನಡೆಯಾಗಿದೆ. ಸರಕಾರ ಇನ್ನಾದರೂ ನಮ್ಮ ಸಮಾಜದ ಬೇಡಿಗೆ ಈಡೇರಿಸಿ ಸ್ಥಗಿತಗೊಳಿಸಲಾಗಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪುನಃ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.