ಭಟ್ಕಳ: ಇನ್ನೇನು ನೀರಿಗೆ ಬರ ಬರುತ್ತಿರುವ ಸಂದರ್ಭದಲ್ಲಿಯೇ ನೀರು ಪೋಲು ಮಾಡಿ ನಿರ್ಲಕ್ಷ್ಯ ತೋರಿದ ಜಾಲಿ ಪಟ್ಟಣ ಪಂಚಾಯತ್ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.
ಭಟ್ಕಳ ನಗರದ ನೀರು ಸರಬರಾಜು ಮಾಡುವ ಕಡವಿನಕಟ್ಟೆ ಡ್ಯಾಂನಿಂದಲೇ ಜಾಲಿ ಪಟ್ಟಣ ಪಂಚಾಯತ್ ಸಹ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಮಾಡಿಕೊಂಡಿದೆ. ಕಡವಿನಕಟ್ಡೆಯಿಂದ ಮುಖ್ಯ ಪೈಪ್‌ಲೈನ್ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಹೋಗಿದ್ದರೆ, ಡಿ.ಪಿ.ಕಾಲೋನಿ, ಹುರುಳಿಸಾಲ್ ಇತ್ಯಾದಿ ಭಾಗಗಳಿಗೆ ಹೋಗುವ ಚಿಕ್ಕ ಪೈಪ್ ಕೂಡಾ ಇದೇ ಹೆದ್ದಾರಿಯಂಚಿನಿಂದಲೇ ಹೋಗಿದೆ.
ಮಂಗಳವಾರ ಬೆಳಿಗ್ಗೆಯಿಂದ ರಂಗೀಕಟ್ಟೆಯಲ್ಲಿ ಪೈಪ್ ಒಡೆದು ನೀರು ಸೋರುತ್ತಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದರಿಂದ ಹೆದ್ದಾರಿಯಂಚಿನಲ್ಲಿಯೇ ನೀರು ಸರಾಗವಾಗಿ ಹರಿದು ಹೋಗುತ್ತಿದ್ದು ಜನ ಆಕ್ರೋಶಗೊಂಡಿದ್ದಾರೆ.
ಸ್ಥಳಕ್ಕೆ ಬಂದ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ರಿಪೇರಿ ಮಾಡಲು ಸಿಬ್ಬಂದಿಗಳಿಲ್ಲ ಎನ್ನುವ ಸಬೂಬು ಹೇಳಿದ್ದರಿಂದ ನಾಗರೀಕರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ನಂತರವಷ್ಟೇ ನೀರು ಸರಬರಾಜು ನಿಂತಿತು. ಅಲ್ಲಿಯ ತನಕ ಕನಿಷ್ಠ ಪೈಪಿನಲ್ಲಿ ನೀರು ಹರಿಯುವುದನ್ನು ನಿಲ್ಲಿಸುವುದಕ್ಕೂ ಉದಾಸೀನ ಮಾಡಿದ್ದು ಮಾತ್ರ ನೀರಿನ ತುಟಾಗ್ರತೆಯ ಅರಿವಿಲ್ಲದ ಸಿಬ್ಬಂದಿಗಳ ಕೆಲಸ ಎಂದು ಜನರಾಡಿಕೊಳ್ಳುವಂತಾಗಿದೆ.
ತಕ್ಷಣ ಸ್ಪಂದನೆ: ಜಾಲಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ನಾಗರಾಜ ನಾಯ್ಕಡ ಅವರು ನೀರು ಪೊಲಾಗುತ್ತಿರುವುದು ತಿಳಿದು ಬೇಸರಗೊಂಡರಲ್ಲದೇ ತಕ್ಷಣ ಸಿಬ್ಬಂದಿಗಳಿಗೆ ಪೊಲಾಗುತ್ತಿರುವ ನೀರನ್ನು ನಿಲ್ಲಿಸುವಂತೆ ತಾಕೀತು ಮಾಡಿದರು. ತಹಸೀಲ್ದಾರ್ ಹೇಳಿದ ತಕ್ಷಣ ನೀರು ಹರಿಯುವುದು ನಿಂತಿದೆ ಎನ್ನುವುದು ಸ್ಥಳೀಯರು ಹೇಳುತ್ತಾರೆ.