ಭಟ್ಕಳ: ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಮನದಲ್ಲಿ ನೆಲೆಯಾಗಿರುವ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು 55 ವರ್ಷಗಳ ಸಾರ್ಥಕ ಸೇವೆ ಪೂರೈಸಿ, 56ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ನಿರಂತರವಾಗಿ ಗುರುತರ ಸಾಧನೆ ಮಾಡುತ್ತಾ ಬಂದಿದ್ದು ಮಾ.31 ರಂದು ಅಂತ್ಯಗೊಂಡ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5.10 ಕೋಟಿ ರೂ. ನಿರ್ವಹಣಾ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ಠೇವಣಿ 464 ಕೋಟಿ 36 ಲಕ್ಷ ರೂ., ಸಾಲ ಮುಂಗಡ 240 ಕೋಟಿ 16 ಲಕ್ಷ ರೂ., ಗುಂತಾವಣಿ 247 ಕೋಟಿ 15 ಲಕ್ಷ ರೂ. ದಾಟಿದ್ದು ನಿವ್ವಳ ಎನ್ ಪಿಎ ಪ್ರಮಾಣವು ಶೇ.0.12ಆಗಿದೆ. ಆದಾಯಕರ ಪಾವತಿ ನಂತರ ವರ್ಷಾಂತ್ಯಕ್ಕೆ ಬ್ಯಾಂಕ್ 3 ಕೋಟಿ 61 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದೂ ತಿಳಿಸಿದ್ದಾರೆ.
ಬ್ಯಾಂಕಿನ ಸ್ವಂತ ಬಂಡವಾಳವು 50 ಕೋಟಿ ರೂ. ದಾಟಿದ್ದು, ದುಡಿಯುವ ಬಂಡವಾಳವು 528 ಕೋಟಿ 99 ಲಕ್ಷ
ರೂ.ವಾಗಿದೆ. ವರದಿ ವರ್ಷದಲ್ಲಿ ಬ್ಯಾಂಕ್ ಒಟ್ಟು 704 ಕೋಟಿ ರೂ. ವ್ಯವಹಾರವನ್ನು ಮಾಡಿದ್ದು, ಸಹಕಾರಿ ಕ್ಷೇತ್ರದಲ್ಲಿ ಭದ್ರವಾಗಿ ತಳವೂರಿ ಪ್ರತಿ ವರ್ಷ ತನ್ನ ವ್ಯವಹಾರ ಹೆಚ್ಚಿಸುತ್ತಾ ಮುನ್ನೆಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದೂ ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನದೊಂದಿಗೆ ತ್ವರಿತ ಬ್ಯಾಂಕಿಂಗ್ ಸೇವೆ ಗ್ರಾಹಕರಿಗೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ ರಾಜ್ಯದ ಮೂರು ಜಿಲ್ಲೆಗಳಲ್ಲಿ 9 ಶಾಖೆಗಳನ್ನು ಹಾಗೂ ಒಂದು ವಿಸ್ತರಣಾ ಶಾಖೆ ಹೊಂದಿದ್ದು, ತ್ವರಿತ ಹಣ ವರ್ಗಾವಣೆ ಮಾಡಲು ಆರ್ ಟಿಜಿಎಸ್/ ನೆಪ್ಟ್ ಸೌಲಭ್ಯ, ಎನ್ ಆರ್‌ಐ ಗ್ರಾಹಕರನ್ನೊಳಗೊಂಡು ಎಲ್ಲಾ ಗ್ರಾಹಕರು ತಮ್ಮ ಖಾತೆಯ ವ್ಯವಹಾರ ತಿಳಿದುಕೊಳ್ಳಲು ಎಸ್‌ಎಂಎಸ್ ಅಲರ್ಟ್ ಸೌಲಭ್ಯ, ಸಿಟಿಎಸ್ ಚೆಕ್ ಕ್ಲಿಯರಿಂಗ್‌ಗೆ ಹಾಜರುಪಡಿಸಿದಾಗ ಅದರ ಮಾಹಿತಿಯನ್ನು ಎಸ್ ಎಂಎಸ್ ಮೂಲಕ ಗ್ರಾಹಕರಿಗೆ ತಿಳಿಸುವ ವ್ಯವಸ್ಥೆ, ವಿದೇಶದಿಂದ ಹಣ ವರ್ಗಾವಣೆ ಮಾಡಲು ಹೋಸ್ಟ್ ಟು ಹೋಸ್ಟ್ ಸೌಲಭ್ಯ ಅಂತರ್ದೇಶೀಯ ಹಣ ವಿನಿಮಯ (ಎಡಿ ಕ್ಯಾಟಗರಿ-2) ಸೌಲಭ್ಯ, ದೇಶದ ಯಾವುದೇ ಎಟಿಎಂ ಬಳಸಿ ಹಣ ಪಡೆಯಲು ರುಪೇ ಎಟಿಎಂ ಕಾರ್ಡ್ ನೀಡುವ ಸೌಲಭ್ಯ ಒದಗಿಸುತ್ತಿದೆ.
ಅತೀ ಶೀಘ್ರದಲ್ಲಿ ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಕ್ಯಾಶ್ ರಿಸೈಕ್ಲರ್ ಮೆಶಿನ್ ನನ್ನು ಸಹ ಅಳವಡಿಸಲಿದ್ದೇವೆ ಎಂದೂ
ತಿಳಿಸಿದ್ದಾರೆ.