Advertisement

Bhatkal: ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿಟ್ಟು ಹೋದ ಗುತ್ತಿಗೆದಾರನಿಗೆ ಹಿಡಿ ಶಾಪ

09:07 PM Apr 20, 2023 | Team Udayavani |

ಭಟ್ಕಳ: ಪುರಸಭಾ ವ್ಯಾಪ್ತಿಯಲ್ಲಿ ನಗರ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿಟ್ಟು ಹೋದ ಗುತ್ತಿಗೆದಾರನಿಗೆ ಜನರು ದಿನಂಪ್ರತಿ ಹಿಡಿ ಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ. ಪುರಸಭಾ ವ್ಯಾಪ್ತಿಯ ಮಣ್ಕುಳಿಯಲ್ಲಿ ಅಮೃತ ನಗರ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಆರಂಭಿಸಿದ ಗುತ್ತಿಗೆದಾರ ರಸ್ತೆ ಕಾಮಗಾರಿಗೆ ಜಲ್ಲಿಯನ್ನು ಹಾಕಿ ಹಾಗೆಯೇ ಬಿಟ್ಟು ಹೋಗಿದ್ದು ದಿನ ನಿತ್ಯ ಓಡಾಡುವವರು ಸುತ್ತಿ ಬಳಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕಳೆದ ಆರು ತಿಂಗಳ ಹಿಂದೆ ಅಮೃತ ನಗರ ಯೋಜನೆಯಡಿ ಪುರಸಭೆ ವ್ಯಾಪ್ತಿಯಲ್ಲಿ ಐದು ಕೋಟಿ ಕಾಮಗಾರಿಗೆ ಗುತ್ತಿಗೆದಾರ ಟೆಂಡರ್ ಪಡೆದುಕೊಂಡು ನಂತರ ಕಾಮಗಾರಿಗಳಿಗೆ ಶಿಲಾನ್ಯಾಸ ಕೂಡಾ ಮಾಡಿದ್ದರು. ಕಾಮಗಾರಿಗೆ ಗುದ್ದಲಿಪೂಜೆ ನಡೆಸಿ ಮೂರು ತಿಂಗಳಾದರೂ ಇತ್ತಕಡೆ ಮುಖ ಮಾಡದ ಗುತ್ತಿಗೆದಾರನಿಗೆ ಪುರಸಭೆಯಿಂದ ಕಾಮಗಾರಿಯನ್ನು ಆರಂಭೀಸುವಂತೆ ನೋಟಿಸ್ ಜಾರಿ ಮಾಡಿದ್ದರೂ ಕೂಡಾ ಕಾಮಗಾರಿ ಅರಂಭಿಸದ ಗುತ್ತಿಗೆದಾರ ನಂತರ ವಿಧಾನ ಸಭಾ ಚುನಾವಣೆ ಘೋಷಣೆಯಾಗುತ್ತಲೇ ಕಾಮಗಾರಿಯನ್ನು ಆರಂಭಿಸಿ ರಸ್ತೆಗೆ ಜಲ್ಲಿ ಹಾಕಿದ್ದನು. ಆದರೆ ವಿಧಾನ ಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜ್ಯಾರಿಯಾದ ಹಿನ್ನೆಲಯಲ್ಲಿ ಕಾಮಗಾರಿಯನ್ನು ನಡೆಸದಂತೆ ಗುತ್ತಿದಾರನಿಗೆ ಪುರಸಭೆಯ ವತಿಯಿಂದ ಆದೇಶ ಮಾಡಿದ್ದು ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಯಿತು. ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಟ್ಟು ಹೋಗಿದ್ದರಿಂದ ಪ್ರತಿ ದಿನ ಈ ರಸ್ತೆಯಲ್ಲಿ ತಿರುಗಾಡುವವರು, ವಾಹನ ಚಾಲಕರು, ಅಟೋದವರು ಬದಲೀ ರಸ್ತೆಯನ್ನು ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಪುರಸಭೆಗೂ ಗುತ್ತಿಗೆದಾರನಿಗೂ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ನಗರೋತ್ಥಾನ ಕಾಮಗಾರಿಯನ್ನು ಟೆಂಡರ್ ಕಡೆದು ಆರು ತಿಂಗಳಿಗೂ ಹೆಚ್ಚು ಸಮಯವಾಗಿದ್ದು, ಶಿಲಾನ್ಯಾಸವನ್ನೂ ಸಹ ಚುನಾವಣಾ ನೀತಿ ಸಂಹಿತೆ ಜ್ಯಾರಿಯಾಗುವುದಕ್ಕೂ ಸಾಕಷ್ಟು ಮೊದಲೇ ಮಾಡಲಾಗಿದ್ದು ರಸ್ತೆ ಕಾಮಗಾರಿಗಾಗಿ ಅಗತ್ಯದ ತಯಾರಿನ್ನು ಕೂಡಾ ಮಾಡಲಾಗಿತ್ತು. ಆದರೆ ಪುನಃ ಗುತ್ತಿಗೆದಾರ ಕಾಮಗಾರಿ ನಡೆಸುವಾಗ ಪುರಸಭೆಯವರು ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಕಾಮಗಾರಿಯನ್ನು ಮಾಡದಂತೆ ಗುತ್ತಿಗೆದಾರನನ್ನು ತಡೆದಿದ್ದಾರೆ. ಚುನಾವನಾ ಪೂರ್ವದಲ್ಲಿ ಸಾಕಷ್ಟು ಮೊದಲೇ ಟೆಂಡರ್ ಕರೆದು ಕಾಮಗಾರಿಯನ್ನು ಆರಂಭಿಸಿಯಾಗಿದ್ದರಿಂದ ಹಾಗೂ ಪುರಸಭೆಯವರೇ ಸ್ವತಃ ನೋಟೀಸು ನೀಡಿ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರನಿಗೆ ಸೂಚನೆ ಕೂಡಾ ನೀಡಿದ್ದು ಆ ಪ್ರಕಾರವಾಗಿ ಕಾಮಗಾರಿಯನ್ನು ಆರಂಭಿಸಿದ್ದನ್ನು ತಡೆಯುವ ಕಾರ್ಯ ಪುರಸಭೆ ಮಾಡಿರುವುದು ಸರಿಯಲ್ಲ ಎನ್ನುವುದು ನಾಗರಿಕರ ಆರೋಪವಾಗಿದೆ.

ಮಳೆಗಾಲದ ಪೂರ್ವದಲ್ಲಿ ಚರಂಡಿ, ರಸ್ತೆ ಕಾಮಗಾರಿ ಪೂರ್ಣವಾಗದಿದ್ದರೆ ಈ ಭಾಗದ ಮಳೆಗಾದಲ್ಲಿ ನೆರೆಹಾವಳಿ ಸಂಭವಿಸುವ ಸಾಧ್ಯತೆ ಇದೆ. ಈ ಕಾಮಗಾರಿ ಸಾಕಷ್ಟು ಮೊದಲೇ ಟೆಂಡರ್ ಕರೆದು ಚುನಾವಣಾ ನೀತಿ ಸಂಹಿತೆ ಜ್ಯಾರಿಯಾಗುವ ಮೊದಲೇ ಆರಂಭ ಮಾಡಿದ್ದರಿಂದ ಕಾಮಗಾರಿಗೆ ನೀತಿ ಸಂಹಿತೆ ಅಡಿಯಲ್ಲಿ ಕಾಮಗಾರಿಯನ್ನು ನಿಲ್ಲಿಸಿರುವುದು ಪುರಸಭೆಯವರ ತಪ್ಪು ನಿರ್ಧಾರವಾಗಿದೆ. ಸಾರ್ವಜನಿಕರಿಗೆ ತೊಂದರೆಯಾದ ಕುರಿತು ಪುರಸಭೆಯವರೇ ಉತ್ತರ ನೀಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next