Advertisement
ಪಡೀಲ್‌ನ ಫಸ್ಟ್ ನ್ಯೂರೊ ಆಸ್ಪತ್ರೆಯ ಸಂಪರ್ಕದಿಂದ ಶನಿವಾರ ದ.ಕ. ಜಿಲ್ಲೆ ಯಲ್ಲಿ 3 ಮತ್ತು ಉತ್ತರ ಕನ್ನಡದ ಭಟ್ಕಳದಲ್ಲಿ 8 ಕೋವಿಡ್-19 ಪ್ರಕರಣ ಪತ್ತೆ ಯಾಗಿವೆ. ಎರಡೂ ಜಿಲ್ಲೆಗಳಲ್ಲಿ ಕಳೆದ 22 ದಿನಗಳಲ್ಲಿ ಈ ಆಸ್ಪತ್ರೆಯ ಸಂಪರ್ಕದಿಂದ ತಗಲಿ ದೃಢವಾಗಿರುವ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 38!
Related Articles
ದ.ಕ.ದ ಕೋವಿಡ್-19 ಮೂಲವೇ ಉತ್ತರ ಕನ್ನಡದ ಭಟ್ಕಳದ ಸೋಂಕಿನ ಮೂಲವೂ ಆಗಿದೆ ಎಂದು ಉತ್ತರ ಕನ್ನಡದ ಡಿಸಿ ಡಾ| ಹರೀಶ್ ಕುಮಾರ್ ಹೇಳಿದ್ದಾರೆ.
Advertisement
ಭಟ್ಕಳದಲ್ಲಿ ಮೊದಲ ಪಾಸಿಟಿವ್ ಬಂದ ಮನೆಯ ಸದಸ್ಯರು ಫಸ್ಟ್ ನ್ಯೂರೋ ಆಸ್ಪತ್ರೆ ಬಿಟ್ಟರೆ ಬೇರೆಲ್ಲೂ ಹೋಗಿರಲಿಲ್ಲ. ಆ ಆಸ್ಪತ್ರೆಯಿಂದ ದ.ಕ. ಜಿಲ್ಲೆಯಲ್ಲೂ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಅದೇ ಆಸ್ಪತ್ರೆಯಿಂದ ಸೋಂಕು ಹರಡಿದೆ ಎಂಬುದನ್ನು ಅಲ್ಲಿನ ಜಿಲ್ಲಾಧಿಕಾರಿಗಳೇ ಮೂಲ ಪತ್ತೆ ಮಾಡಿ ತಿಳಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉ.ಕ.ದ 10 ಮಂದಿಗೆ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ
ಭಟ್ಕಳದಿಂದ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಎ. 10ರಿಂದ ಎ. 20ರ ನಡುವೆ ಒಟ್ಟು ಮೂರು ಕುಟುಂಬಗಳ 10 ಮಂದಿ ಬಂದಿದ್ದರು ಎಂಬ ಮಾಹಿತಿ ಇದೆ. ಭಟ್ಕಳದಲ್ಲಿ ಮೇ 6ರಂದು ಯುವತಿಗೆ ಸೋಂಕು ದೃಢಪಟ್ಟ ತತ್‌ಕ್ಷಣವೇ ಅವರ ಟ್ರಾವೆಲ್ ಹಿಸ್ಟರಿಯನ್ನು ಅಲ್ಲಿನ ಜಿಲ್ಲಾಡಳಿತ ಕಲೆ ಹಾಕಿತ್ತು. ಆ ಕುಟುಂಬ ಫಸ್ಟ್ ನ್ಯೂರೋ ವಿನಾ ಬೇರೆಲ್ಲೂ ಹೋಗಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಅಲ್ಲಿನ ಜಿಲ್ಲಾಡಳಿತ ದ.ಕ. ಜಿಲ್ಲಾಡಳಿತವನ್ನು ಸಂಪರ್ಕಿಸಿ ಎ.1ರ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ ಉ.ಕನ್ನಡದ ಎಲ್ಲರ ವಿವರಗಳನ್ನು ತರಿಸಿಕೊಂಡಿದೆ. ಎ.13ರ ಆಸುಪಾಸು, ಎ.17 ಮತ್ತು ಎ. 20ರಂದು ಒಟ್ಟು ಮೂರು ಕುಟುಂಬಗಳ 10 ಮಂದಿ ಫಸ್ಟ್ ನ್ಯೂರೋಕ್ಕೆ ಆಗಮಿಸಿದ್ದಾರೆ. ಈ ಪೈಕಿ ಎ. 20ರಂದು ಆಗಮಿಸಿದ್ದ ಐದು ತಿಂಗಳ ಮಗು ಮತ್ತು ಆತನ ತಂದೆಗೆ ಪಾಸಿಟಿವ್ ಬಂದಿದೆ. ಹೊರ ರೋಗಿಗಳ
ಮಾಹಿತಿ ನೀಡಿಲ್ಲ!
ಫಸ್ಟ್ ನ್ಯೂರೋದಲ್ಲಿ ಎ.1ರಿಂದ 20ರ ನಡುವೆ ಚಿಕಿತ್ಸೆ ಪಡೆದು ಬಿಡುಗಡೆಗೊಂಡ 79 ಮಂದಿಯ ಮಾಹಿತಿಯನ್ನು ದ.ಕ. ಜಿಲ್ಲಾ ಆರೋಗ್ಯ ಇಲಾಖೆಯು ಆಯಾ ಜಿಲ್ಲೆಗಳಿಗೆ ನೀಡಿತ್ತು. ಆದರೆ ಭಟ್ಕಳದ 10 ಮಂದಿಯ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಉ.ಕ. ಜಿಲ್ಲಾಡಳಿತವು ವಿಚಾರಿಸಿದಾಗ, ಒಳರೋಗಿಗಳ ಮಾಹಿತಿ ಮಾತ್ರ ಒದಗಿಸಲಾಗಿದೆ. ಹೊರರೋಗಿಗಳದ್ದಲ್ಲ ಎಂದು ತಿಳಿಸಿದ್ದರು. ಈ ನಡುವೆ, ಉಡುಪಿ ಜಿಲ್ಲಾಧಿಕಾರಿಗಳು, ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಾ.1ರಿಂದ ಒಳ ಮತ್ತು ಹೊರರೋಗಿಗಳಾಗಿ ದಾಖಲಾಗಿರುವ ಉಡುಪಿ ಜಿಲ್ಲೆಯ ನಿವಾಸಿಗಳ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ. ಮಾಹಿತಿ ನೀಡಿದ್ದೇವೆ; ನೀಡಿಲ್ಲ !
ಫಸ್ಟ್ ನ್ಯೂರೋದಲ್ಲಿ ಫೆ. 1ರಿಂದಲೇ ದಾಖಲಾದವರು, ಬಿಡುಗಡೆಯಾದವರು ಮತ್ತು ಹೊರರೋಗಿಗಳಾಗಿ ಬಂದು ಹೋದವರ ಎಲ್ಲ ಮಾಹಿತಿಯನ್ನು ದ.ಕ. ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದೇವೆ. ಭಟ್ಕಳದ ಐದು ತಿಂಗಳ ಮಗು ಚಿಕಿತ್ಸೆ ಪಡೆದಿರುವ ಬಗ್ಗೆಯೂ ಎ. 23ರಂದು ಮಾಹಿತಿ ರವಾನಿಸಲಾಗಿದೆ ಎನ್ನುವುದು ಆಸ್ಪತ್ರೆಯವರ ವಾದ. ಆದರೆ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ವಿಚಾರಿಸಿದಾಗ, ಎ. 23ರಂದು ಆರೋಗ್ಯ ಇಲಾಖೆಗೆ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿಲ್ಲ; ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆದು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಗೊಂಡ ವೃದ್ಧೆ ಎ. 23ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದ ಎಲ್ಲ ಒಳರೋಗಿಗಳ ಮಾಹಿತಿ ಕಲೆ ಹಾಕಿ ಆಯಾ ಜಿಲ್ಲಾಡಳಿತಗಳಿಗೆ ಎ. 27ರಂದು ಕಳುಹಿಸಿ ಕೊಡಲಾಗಿತ್ತು. ಆ ಬಳಿಕ ಹೊರರೋಗಿಗಳಾಗಿ ಆಗಮಿಸಿದ್ದವರ ಮಾಹಿತಿಯನ್ನೂ ಮೇ ಪ್ರಥಮ ವಾರದಲ್ಲಿ ಸಂಗ್ರಹಿಸಿ ಮೇ 5ಕ್ಕೆ ಎಲ್ಲ ಜಿಲ್ಲಾಡಳಿತಗಳಿಗೆ ಕಳುಹಿಸಿ ಕೊಡಲಾಗಿತ್ತು ಎಂದಿದ್ದಾರೆ. ಆದರೆ ಒಟ್ಟು ಬೆಳವಣಿಗೆಗಳ ಬಗ್ಗೆ ಮಾತನಾಡಲು ಫಸ್ಟ್ ನ್ಯೂರೋ ಆಸ್ಪತ್ರೆಯ ಎಂಡಿ ಡಾ| ರಾಜೇಶ್ ಶೆಟ್ಟಿ ನಿರಾಕರಿಸಿದ್ದಾರೆ. ಹಸ್ತಕ್ಷೇಪವಿಲ್ಲ: ಅಶ್ವತ್ಥ ನಾರಾಯಣ
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಕೋವಿಡ್-19 ತಗಲಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಾನು ಹಸ್ತಕ್ಷೇಪ ಮಾಡಿಲ್ಲ ಎಂದು ಡಿಸಿಎಂ ಡಾ| ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ. ಫಸ್ಟ್ ನ್ಯೂರೋ ಸಂಪರ್ಕಿತರ ಮೂಲಕ ದ.ಕ. ಮತ್ತು ಉ.ಕ. ಜಿಲ್ಲೆಗೆ ಸೋಂಕು ಹರಡುತ್ತಿದ್ದರೂ ಆ ಆಸ್ಪತ್ರೆಯ ಬಗ್ಗೆ ತನಿಖೆ ನಡೆಸದಂತೆ ಡಿಸಿಎಂ ಅಶ್ವತ್ಥ ನಾರಾಯಣ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಅವರು “ಉದಯವಾಣಿ’ಗೆ ಸ್ಪಷ್ಟನೆ ನೀಡಿದ್ದಾರೆ. ದ.ಕ. ಜಿಲ್ಲೆಯ ಸೋಂಕಿನ ಮೂಲ ಪತ್ತೆಯನ್ನು ಅಲ್ಲಿನ ಸ್ಥಳೀಯಾಡಳಿತ ಮಾಡಲಿದೆ. ಒತ್ತಡ ಹೇರುವಂತಹ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಸೋಂಕಿನ ಮೂಲ ಪತ್ತೆ ತನಿಖೆಯ ವರದಿ ರವಿವಾರ ಕೈ ಸೇರುವ ಸಾಧ್ಯತೆ ಇದೆ. ಅದನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ,
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಗಳೂರು ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಉಡುಪಿ ಜಿಲ್ಲೆಯ 30 ಜನರನ್ನು ಶನಿವಾರ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ಗೆ ಅಳವಡಿಸಿದ್ದೇವೆ.
– ಡಾ| ಸುಧೀರ್‌ಚಂದ್ರ ಸೂಡ,
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಎಪ್ರಿಲ್‌ನಲ್ಲಿ ಉತ್ತರ ಕನ್ನಡದ 10 ಮಂದಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿರುವುದು ಗೊತ್ತಾಗಿದೆ. ಒಂದುವೇಳೆ ಎಲ್ಲರಿಗೂ ಪಾಸಿಟಿವ್ ಬಂದಲ್ಲಿ ದ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದು ವಿಷಯದ ಗಂಭೀರತೆಯನ್ನು ತಿಳಿಸಲಾಗುವುದು.
-ಡಾ| ಹರೀಶ್ ಕುಮಾರ್,
ಉತ್ತರ ಕನ್ನಡ ಜಿಲ್ಲಾಧಿಕಾರಿ