ಭಟ್ಕಳ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಹಲವು ಕಡೆಗಳಲ್ಲಿ ಹಾನಿಯಾಗಿದೆ. ಜೋರಾಗಿ ಬೀಸುವ ಗಾಳಿಯಿಂದಾಗಿ ಮರಗಳು ಮುರಿದು ಬೀಳುತ್ತಿದ್ದು ಸಮೀಪದ ಮನೆ, ವಾಹನಗಳಿಗೂ ಜಖಂ ಆಗಿರುವ ಕುರಿತು ವರದಿಯಾಗಿದೆ.
ತಾಲೂಕಿನ ಕಾಯ್ಕಿಣಿಯ ಸಬಾತಿಯಲ್ಲಿ ಗೌರಿ ದುರ್ಗಪ್ಪ ನಾಯ್ಕ ಎನ್ನುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಮಂಜುನಾಥ ವೆಂಕ್ಟಪ್ಪ ನಾಯ್ಕ ಎನ್ನುವವರ ಮನೆಯ ಮೇಲೆಯೂ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಅಂದಾಜು ಮಾಡಿದ್ದಾರೆ.
ನಿರಂತರ ಮಳೆಯಿಂದ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು ಅಪಾಯದ ಅಂಚಿನಲ್ಲಿವೆ. ಗ್ರಾಮೀಣ ಭಾಗದಲ್ಲಿ ಗದ್ದೆ ತೋಟಗಳು ಕೂಡಾ ಜಲಾವೃತವಾಗಿದ್ದು ಅಡಿಕೆ ಮರಗಳಿಗೆ ಕೊಳೆ ರೋಗದ ಭೀತಿ ರೈತರನ್ನು ಕಾಡುತ್ತಿದೆ. ದಿನಾಂಕ22ರಂದು ಬೆಳಿಗ್ಗೆ ಅಂತ್ಯ ಕಂಡ 24 ಗಂಟೆಗಳಲ್ಲಿ ಒಟ್ಟು 36.8ಮಿ.ಮಿ. ಮಳೆಯಾಗಿದ್ದು ಇಲ್ಲಿಯ ತನಕ ಒಟ್ಟೂ 2095.6 ಮಿ.ಮಿ. ಮಳೆಯಾಗಿದೆ.
ಪರಿಹಾರ ಕಾಣದ ರಂಗೀಕಟ್ಟೆ ಸಮಸ್ಯೆ: ಸ್ಥಳೀಯವಾಗಿ ಪರಿಹಾರ ಕಾಣಬೇಕಿದ್ದ ಚಿಕ್ಕ ಸಮಸ್ಯೆಯೊಂದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು, ಇಂಜಿನಿಯರ್‌ಗಳು ಬಂದು ನೋಡಿ ಹೋದರೂ ಸಹ ಪರಿಹಾರ ಮಾತ್ರ ಶೂನ್ಯ ಎನ್ನುವಂತಾಗಿದೆ. ಕೇವಲ ರಂಗೀಕಟ್ಟೆಯ ಸುಮಾರು 5೦೦ ಮೀಟರ್ ಹೆದ್ದಾರಿಯ ಮೇಲೆ ಚಿಕ್ಕ ಮಳೆ ಬಂದರೂ ನೀರು ನಿಂತು ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಇದೇ ಸಮಸ್ಯೆ ಕಾಡುತ್ತಿದ್ದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಇದೇ ಮಾರ್ಗವಾಗಿ ಹೋಗಿದ್ದರೂ ಕೂಡಾ ಯಾರೂ ಇದನ್ನು ಸಮಸ್ಯೆ ಎಂದು ಪರಿಗಣಿಸದೇ ಇರುವುದೇ ಇಂದು ದೊಡ್ಡ ಸಮಸ್ಯೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ರಂಗೀಕಟ್ಟೆ, ಮಣ್ಕುಳಿ, ಶಂಶುದ್ಧೀನ್ ಸರ್ಕಲ್ ಬಳಿಯಲ್ಲಿ ನೀರು ನಿಲ್ಲದಂತೆ ಮಾಡುವುದಕ್ಕೇ ವಿಶೇಷ ಸಭೆ ಮಾಡಿದ್ದಲ್ಲದೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರೂ ಕೂಡಾ ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎಚ್ಚರಗೊಂಡಂತೆ ಕಂಡಿಲ್ಲ. ಪುರಸಭೆಯಂತೂ ಇದು ತಮ್ಮ ಸಮಸ್ಯೆಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದು ಮಳೆಗಾಲಕ್ಕೂ ಪೂರ್ವ ಅಗತ್ಯದ ಕಾಮಗಾರಿಯನ್ನು ಮಾಡಿಕೊಂಡಿದ್ದರೆ ಶೇ.50ರಷ್ಟು ಸಮಸ್ಯೆ ಪರಿಹಾರವಾಗುವ ಎಲ್ಲಾ ಸಾಧ್ಯತೆಗಳಿತ್ತಾದರೂ ನಿರ್ಲಕ್ಷ್ಯ ಮಾಡಿದ್ದೇ ಇಂದು ರಾಜ್ಯ ರಾಷ್ಟçದ ತನಕವೂ ರಂಗೀಕಟ್ಟೆ ಸಮಸ್ಯೆ ಪ್ರತಿಧ್ವನಿಸಲು ಆರಂಭವಾಗಿದೆ ಎನ್ನಲಾಗಿದೆ. ಒಂದು ಚಿಕ್ಕ ಮಳೆ ಬಂದರೂ ಸಹ ವಾಹನಗಳ ಸಾಲು ಕಂಡು ಬರುತ್ತಿದ್ದು ಪರಿಹಾರಕ್ಕಾಗಿ ವಿದೇಶಿ ಇಂಜಿನಿಯರ್ ಗಳು ಬರಬೇಕಾಗಿದೆ ಎನ್ನುವ ಹಾಸ್ಯ ಚಟಾಕಿ ಕೂಡಾ ಪ್ರಚಲಿತದಲ್ಲಿದೆ.
ರಂಗೀಕಟ್ಟೆ ಸಮಸ್ಯೆಗೆ ಪುರಸಭೆಯ ತಪ್ಪು ನಿರ್ಧಾರವೇ ಕಾರಣವಾಗಿದೆ. ತಮ್ಮ ಜವಾಬ್ದಾರಿಯನ್ನು ಆಯ್.ಆರ್.ಬಿ.ಯವರ ಮೇಲೆ ಹಾಕಲು ಕಾಣುತ್ತಿದ್ದಾರೆ. ಮಳೆಗಾಲಕ್ಕೆ ಮೊದಲು ಅಗತ್ಯ ಕಾಮಗಾರಿ ಕೈಗೊಂಡಿದ್ದರೆ ಇದು ಸಮಸ್ಯೆ ಬರುತ್ತಿರಲಿಲ್ಲ.
-ಇನಾಯತ್‌ವುಲ್ಲಾ ಶಾಬಂದ್ರಿ, ಪುರಭಾ ಮಾಜಿ ಅಧ್ಯಕ್ಷ
ಒಂದು ಚಿಕ್ಕ ಸಮಸ್ಯೆಯನ್ನು ಪರಿಹಾರ ಮಾಡಲು ಸ್ಥಳೀಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಇಂಜಿನಿಯರ್‌ಗಳು ಇಷ್ಟೊಂದು ಕಷ್ಟಪಡುತ್ತಿರುವುದನ್ನು ಕಂಡರೆ ನಾಗರೀಕರು ತಲೆ ತಗ್ಗಿಸುವಂತಾಗಿದೆ. ಪ್ರತಿ ದಿನ ಬಂದು ನೋಡಿ ಹೋಗುತ್ತಿದ್ದಾರೆಯೇ ವಿನಹಃ ಪರಿಹಾರ ಮಾತ್ರ ಶೂನ್ಯ. ಇನ್ನು ಎಷ್ಟು ವರ್ಷ ಕಾಯಬೇಕು ಈ ಚಿಕ್ಕ ಸಮಸ್ಯೆ ಪರಿಹಾರಕ್ಕೆ ಎಂದು ಕೇಳುವ ಪರಿಸ್ಥಿತಿ ಬಂದಿದೆ
-ದೀಪಕ್ ನಾಯ್ಕ, ರಂಗೀಕಟ್ಟೆ, ಭಟ್ಕಳ