ಭಟ್ಕಳ: ಮಹಿಳಾ ಅಭ್ಯುದಯ ಪತ್ತಿನ ಸಹಕಾರಿ ಸಂಘದ ಚುನಾವಣಾ ಪ್ರಕ್ರಿಯೆಯೇ ಕಾನೂನು ಬಾಹಿರವಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಕೂಡಾ ಅನಗತ್ಯ ಗೊಂದಲ ಇರುವುದರಿಂದ ಆರು ಜನ ನಿರ್ದೇಶಕರು ಸಹಾಯಕ ನಿಬಂಧಕರ ಕೊರ್ಟಿನಲ್ಲಿ ತಕರಾರು ದಾವೆ ಸಲ್ಲಿಸಿದ್ದೇವೆ. ದಾವೆ ಇತ್ಯರ್ಥವಾಗುವ ತನಕ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂದು ನಿರ್ದೇಶಕಿ ಚಂದ್ರಪ್ರಭಾ ನಾಯ್ಕ ಸೇರಿದಂತೆ ಆರು ಜನ ನಿರ್ದೇಶಕರು ಆಗ್ರಹಿಸಿದ್ದಾರೆ.
ನಗರದ ಗೋಪಾಲಕೃಷ್ಣ ಸಭಾಭವನದಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಹಿಳಾ ಅಭ್ಯುದಯ ಸಹಕಾರಿ ಸಂಘದ ನಿರ್ದೇಶಕಿ ಚಂದ್ರಪ್ರಭಾ ನಾಯ್ಕ ಮಹಿಳಾ ಅಭ್ಯುದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿ ಮೇಲೆ ಒತ್ತಡ ಹಾಕಿ ಮಾಡಲಾಗಿದೆ. ಈ ಹಿಂದೆ ಚುನಾವಣೆಗೆ ೨ಎ ಅಡಿಯಲ್ಲಿ ನಾಮಪತ್ರ ಸಲ್ಲಿಸಿದ್ದ ಸದಸ್ಯರೋರ್ವರು ನಂತರ ಜನರಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇನ್ನೋರ್ವರು ತಮ್ಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹಾಜರು ಮಾಡದೇ ಪರಿಶಿಷ್ಟ ಜಾತಿ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ ಇದರ ಬಗ್ಗೆ ಈಗಾಗಲೇ ದೂರು ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸಮಬಲದ ಸದಸ್ಯರಿದ್ದು, ಮೊದಲು ಚೀಟಿ ಮೂಲಕ ಆಯ್ಕೆ ಮಾಡುವ ನಿರ್ಣಯ ಮಾಡಲಾಗಿತ್ತು. ಆದರೆ ಅವಧಿ ಮುಗಿದ ನಂತರ ಬಂದ ಸದಸ್ಯರಿಗೆ ಮತದಾನ ಮಾಡುವ ಹಕ್ಕನ್ನು ನೀಡಲಾಯಿತು. ಇದನ್ನು ವಿರೋಧಿಸಿದ ನಾವು ಆರೂ ಜನರು ಮತದಾನದಿಂದಲೇ ದೂರ ಉಳಿದಿದ್ದೆವು. ಸಮಯ ಮುಗಿದರೂ ಸಭೆಯಲ್ಲಿರದ ಮತ್ತೊಬ್ಬರು ನಿರ್ದೇಶಕರನ್ನು ಕರೆಯಿಸಿ ಏಳು ಮಂದಿ ನಿರ್ದೇಶಕರ ಬಹುಮತ ಎಂದು ಅಧ್ಯಕ್ಷರು-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದು ಅಕ್ರಮವಾಗಿದ್ದು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಸಹಾಯಕ ನಿಬಂಧಕರಿಗೆ ನಾವು ಸಲ್ಲಿಸಿದ ದೂರಿನ ವಿಚಾರಣೆ ಆ. 16 ರಂದು ಇದ್ದಾಗ್ಯೂ ಇದ್ಯಾವುದನ್ನೂ ಲೆಕ್ಕಿಸದೇ ವ್ಯವಸ್ಥಾಪಕರ ಮೇಲೆ ಒತ್ತಡ ಹೇರಿ ಜುಲೈ 31 ರಂದು ಪ್ರಥಮ ಆಡಳಿತ ಮಂಡಳಿ ಸಭೆ ಕರೆಯಲಾಗಿದೆ. ಈ ಸಭೆಗೆ ನಾವು ತೀವ್ರ ವಿರೋಧ ವ್ಯಕ್ತಪಡಿಸಿದ್ದು ದೂರು ಇತ್ಯರ್ಥವಾದ ಬಳಿಕ ಸಭೆ ನಡೆಸಿ ಎಂದೂ ತಿಳಿಸಿದ್ದಾಗ್ಯೂ ಆ1 ರಂದು ಏಳು ಮಂದಿ ನಿರ್ದೇಶಕರು ವ್ಯವಸ್ಥಾಪಕರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದ್ದಾರೆ. ಅ.6 ರಂದು ನಡೆಯುವ ಸಭೆಗೆ ನಾವು ಆರು ಜನರನ್ನು ಸೌಜನ್ಯಕ್ಕೂ ಕರೆಯಲಿಲ್ಲ. ಸಭೆಯ ಠರಾವಿನಲ್ಲಿ ಸಂಘದ ವ್ಯವಸ್ಥಾಪಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿರುವುದಾಗಿ ತಿಳಿದು ಬಂದಿದ್ದು ಇದು ಸರಿಯಲ್ಲ. ಇನ್ನೂ ತನಕ ಚುನಾವಣಾಧಿಕಾರಿಗಳು ನಮಗೆ ನಿರ್ದೇಶಕರಾಗಿ ಆಯ್ಕೆಯಾದ ಬಗ್ಗೆ ಪ್ರಮಾಣ ಪತ್ರ ನೀಡಿಲ್ಲ ಎಂದು ದೂರಿದ ಅವರು ಏಳು ಮಂದಿ ನಿರ್ದೇಶಕರ ಪೈಕಿ ಕೆಲ ನಿರ್ದೇಶಕರು ಸಂಘದಲ್ಲಿ ಚಿನ್ನಾಭರಣ ಅಡವಿನ ಸಾಲದಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ. ಇವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಸಂಘದ ನಿರ್ದೇಶಕರಾಗಿ ಸಂಘದ ಬಗ್ಗೆ ಆರೋಪ ಮಾಡಿದ್ದರಿಂದ ಸಂಘದ ಮೇಲೆ ಸದಸ್ಯರಿಗಿರುವ ವಿಶ್ವಾಸ ಹೋಗಿದೆ. ಸಂಘದ ಅಭಿವೃದ್ಧಿಗೆ ಮಾಜಿ ಅಧ್ಯಕ್ಷೆ ಲಕ್ಷ್ಮೀ ಮಂಜಪ್ಪ ನಾಯ್ಕ ಹಾಗೂ ವ್ಯವಸ್ಥಾಪಕಿ ರಾಜಶ್ರೀ ಮುರಾರಿ ನಾಯ್ಕ ಅವರ ಪರಿಶ್ರಮ ತುಂಬಾ ಇದೆ. ಸಂಘ 32 ಕೋಟಿ ವ್ಯವಹಾರ ಹೊಂದಿದ್ದು ಕಳೆದ ಮಾರ್ಚ ಅಂತ್ಯಕ್ಕೆ 32 ಲಕ್ಷ ಲಾಭ ಗಳಿಸಿದೆ ಎಂದರು.
ನಮ್ಮ ಮೇಲೆ ಅಧಿಕಾರದ ಲಾಲಸೆಯ ಆರೋಪ ಹೊರಿಸಿದ್ದು ನಮಗೆ ಅಧಿಕಾರದ ಲಾಲಸೆ ಇಲ್ಲ. ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ನಾವೆಲ್ಲರೂ ಭಯಭೀತರಾಗಿದ್ದೇವೆ. ನಾವು ನೀಡಿರುವ ದೂರು ಇತ್ಯರ್ಥವಾಗುವ ವರೆಗೆ ಸಂಘದಲ್ಲಿ ಯಾವುದೇ ಸಭೆ ನಡೆಸಬಾರದು. ಸಂಘಕ್ಕೆ ಶೀಘ್ರ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಅವರು ಒತ್ತಾಯಿಸಿದರು.
ಹಿರಿಯ ಸದಸ್ಯೆ ಲಕ್ಷ್ಮೀ ದುರ್ಗಪ್ಪ ನಾಯ್ಕ ಮಾತನಾಡಿ ಕಳೆದ 27 ವರ್ಷದಿಂದ ಸಂಘದ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದ ನಾನು ಉಪಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಸಂಘದ ಎಲ್ಲಾ ವ್ಯವಹಾರವೂ ಪಾರದರ್ಶಕವಾಗಿದ್ದು ಉತ್ತಮವಾಗಿ ನಡೆಯುತ್ತಿದೆ. ಕೆಲ ನಿರ್ದೇಶಕರು ಸಂಘದ ಮೇಲೆ ಹೊರಿಸಿದ ಆರೋಪ ಖಂಡನೀಯ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕಿ ಭವಾನಿ ನಾಯ್ಕ, ಲಕ್ಷ್ಮೀ ಗೊಂಡ, ಬೀಬಿ ಹಾಜಿರಾ ಉಪಸ್ಥಿತರಿದ್ದರು.