Advertisement

Bhatkal: ಕೋಮು ಗಲಭೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ: ಎಸ್ಪಿ ಎಂ. ನಾರಾಯಣ

09:13 PM Jul 11, 2024 | Team Udayavani |

ಭಟ್ಕಳ: ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದರು.

Advertisement

ಭಟ್ಕಳದ ಡಿವೈಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋಮು ಗಲಭೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.ಪ್ರತಿಯೊಬ್ಬರೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಗಾಂಜಾ, ಡ್ರಗ್ಸ್, ಮಟ್ಕಾ, ಅನಧಿಕೃತ ಕ್ಲಬ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಅಕ್ರಮ ಚಟುವಟಿಕೆಗಳಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಶಾಮೀಲಾದಲ್ಲಿ ಅಂಥವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆಯ ನಿಗಾ ಇರಲಿದೆ. ವೈಯಕ್ತಿಕ ತೇಜೋವಧೆ, ಸುಳ್ಳು ಸುದ್ದಿ ಹರಡಿಸುತ್ತಿರುವುದು ಕಂಡು ಬಂದರೆ ಕಠಿಣ ಕ್ರಮದ ಜತೆಗೆ ಎಡ್ಮಿನ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಜಿಲ್ಲೆಯಲ್ಲಿ ಇ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು.

ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯ ವೃದ್ಧಿಸಲು ಕ್ರಮ ವಹಿಸಲಾಗುವುದು. ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಬರುವವರಿಗೆ ತ್ವರಿತಗತಿಯಲ್ಲಿ ಸ್ಪಂದಿಸಲಾಗುವುದು. ನೊಂದವರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಸೂಚಿಸಲಾಗಿದೆ.

Advertisement

ಹೊಸ ಐಪಿಸಿ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಹೊಸ ಕಾಯ್ದೆ ಬಗ್ಗೆ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ವಿಚಾರಣಾಧೀನ ಖೈದಿಗಳನ್ನು ಸಮರ್ಪಕವಾಗಿ ನೋಡಿಕೊಳ್ಳಲು ಸೂಚಿಸಲಾಗಿದೆ. ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿರುವ ಎಟಿಎಸ್ ತಂಡವನ್ನು ಸಕ್ರೀಯಗೊಳಿಸಲಾಗುತ್ತದೆ.

ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಡೇ ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಅಪರಾಧ ತಡೆ ಮತ್ತು ಮಾದಕ ವಸ್ತು ಸೇವನೆಯಿಂದಾಗು ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದ ಅವರು ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಹೊಸ ಪೊಲೀಸ್ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಭಟ್ಕಳದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ದಿನದ 24 ಗಂಟೆಯೂ ಪೊಲೀಸ್ ಸೇವೆ ಲಭ್ಯವಿದೆ. ಯಾವುದೇ ತಾರತಮ್ಯ ಇಲ್ಲದೇ ಇಲಾಖೆ ಕಾರ್ಯನಿರ್ವಹಿಸಲಿದೆ. ಜನತೆಗೆ ಉತ್ತಮ ಸ್ಪಂದನೆ ನೀಡುವಂತೆ ಈಗಾಗಲೇ ಎಲ್ಲಾ ಠಾಣೆಗೂ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ತೀವ್ರ ಮಳೆ ಬೀಳುತ್ತಿದ್ದು, ಈ ಸಂದರ್ಭದಲ್ಲಿ ಉಂಟಾಗುವ ಸಂಕಷ್ಟದ ಸಂದರ್ಭದಲ್ಲೂ ಎನ್ ಡಿ ಆರ್ ಎಪ್ ಜತೆಗೆ ಪೊಲೀಸರೂ ಕಾರ್ಯ ನಿರ್ವಹಿಸಿ ಜನತೆಗೆ ಸಹಾಯ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಯ ಸಮಸ್ಯೆಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಐಆರ್ ಬಿ, ಹೆದ್ದಾರಿ ಪ್ರಾಧಿಕಾರದವರ ಜತೆಗೂ ಚರ್ಚೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ, ನಗರ ಠಾಣೆಯ ಇನ್ಸಪೆಕ್ಟರ್ ಗೋಪಿಚಂದನ, ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ ಗೋಪಾಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next