ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಜಾಲಿ ಕ್ರಾಸ್ ಬಳಿಯಲ್ಲಿ ಕಾರವಾರದಿಂದ ಮಣಿಪಾಲದ ಕಡೆಗೆ ಹೋಗುತ್ತಿದ್ದ ಅಂಬುಲೆನ್ಸ್ ಹಾಗೂ ಕಂಟೈನರ್ ಲಾರಿಯ ನಡುವೆ ಢಿಕ್ಕಿ ಸಂಭವಿಸಿದ್ದು ಅಂಬುಲೆನ್ಸ್ ವಾಹನದ ಎದುರು ಭಾಗ ಸಂಪೂರ್ಣ ಜಖಂ ಗೊಂಡಿದೆ.
ಅದ್ರಷ್ಟವಷಾತ್ ಅಂಬುಲೆನ್ಸ್ ಚಾಲಕ, ಅಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಅವರ ಸಂಬಂಧಿಗಳು ಕೂಡಾ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಕಾರವಾರದಿಂದ ಹೃದಯ ಸಂಬಂಧಿ ರೋಗಿಯೋರ್ವರನ್ನು ಕರೆದುಕೊಂಡು ಮಣಿಪಾಲದ ಕಡೆಗೆ ಹೋಗುತ್ತಿದ್ದ ಅಂಬುಲೆನ್ಸ್ ಜಾಲಿ ಕ್ರಾಸ್ ಹತ್ತಿರ ತಲುಪುತ್ತಿದ್ದಂತೆಯೇ ಎದುರುಗಡೆ ಹೋಗುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಂಟೈನರ್ ಲಾರಿಯು ಜಾಲಿ ಕ್ರಾಸ್ ಹತ್ತಿರ ಬರುತ್ತಿದ್ದಂತೆಯೇ ಲಾರಿಯ ಎದುರುಗಡೆಯಲ್ಲಿ ಕಾರೊಂದು ಎದುರುಗಡೆಯಲ್ಲಿ ಬಂದು ತಿರುವು ಪಡೆದುಕೊಂಡು ಹೋಗಿದ್ದರಿಂದ ಲಾರಿ ಚಾಲಕ ಬ್ರೇಕ್ ಹಾಕಿದ್ದು ಹಿಂಬದಿಯಿಂದ ಬರುತ್ತಿದ್ದ ಅಂಬುಲೆನ್ಸ್ ವಾಹನ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಅಂಬುಲೆನ್ಸ್‍ನ ಎದುರುಗಡೆಯಿರುವ ಮಡ್‍ಗಾರ್ಡ್ ಲಾರಿಯ ಒಳಕ್ಕೆ ಹೊಕ್ಕು ಲಾರಿಗೆ ಹಿಂಭಾಗಕ್ಕೆ ಸಿಕ್ಕಿ ಹಾಕಿ ಕೊಂಡಿತ್ತು.
ತತ್ ಕ್ಷಣ ಅಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ಇನ್ನೊಂದು ಅಂಬುಲೆನ್ಸ್ ಮೂಲಕ ಮಣಿಪಾಲಕ್ಕೆ ಕಳುಹಿಸಲಾಯಿತು. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.