ಭಟಿಂಡಾ: ಪಂಜಾಬ್‌ನ ಭಟಿಂಡಾದಲ್ಲಿನ ಸೇನಾ ಘಟಕವೊಂದರಲ್ಲಿ ಬುಧವಾರ ಬೆಳಗಿನ ಜಾವ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರ ಸಹಿತ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಯೋಧರು ತಮ್ಮ ಶಿಬಿರಗಳಲ್ಲಿ ಮಲಗಿದ್ದ ಸಮಯದಲ್ಲಿ ಅಂದರೆ ಮುಂಜಾನೆ 4.30ರ ವೇಳೆಗೆ ಈ ದುರ್ಘಟನೆ ನಡೆದಿದೆ.
ಇದು ಉಗ್ರ ಕೃತ್ಯವಲ್ಲ. ಮೇಲ್ನೋಟಕ್ಕೆ ಇದು ಯೋಧರೊಳಗಿನ ಜಗಳದಿಂದಾಗಿ ನಡೆದ ಕೃತ್ಯ(ಭಾÅತೃ ಹತ್ಯೆ)ದಂತೆ ಕಂಡುಬಂದಿದೆ ಎಂದು ಮೊದಲಿಗೆ ಪೊಲೀಸರು ತಿಳಿಸಿದ್ದಾರಾದರೂ ಈ ಘಟನೆಯು ಹಲವು ಅನುಮಾನಗಳಿಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಘಟನೆ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ ಎಂದು ಸಂಜೆ ವೇಳೆಗೆ ಪೊಲೀಸರು ಹೇಳಿದ್ದಾರೆ.
ಎಫ್ಐಆರ್‌ನಲ್ಲೇನಿದೆ?: ಕುರ್ತಾ ಪೈಜಾಮ ಧರಿಸಿಕೊಂಡು, ಇನ್ಸಾಸ್ ರೈಫಲ್ ಹಾಗೂ ಕೊಡಲಿಯೊಂದನ್ನು ಹಿಡಿದುಕೊಂಡು ಬಂದ ಇಬ್ಬರು ವ್ಯಕ್ತಿಗಳು, ಮಲಗಿದ್ದ ಯೋಧರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪಂಜಾಬ್ ಪೊಲೀಸರು ಎಫ್ಐಆರ್‌ನಲ್ಲಿ ಉಲ್ಲೇಖೀಸಿದ್ದಾರೆ. ಅಲ್ಲದೇ 2 ದಿನಗಳ ಹಿಂದಷ್ಟೇ ಮಿಲಿಟರಿ ಸ್ಟೇಶನ್‌ನಲ್ಲಿದ್ದ ಇನ್ಸಾಸ್ ರೈಫಲ್‌ಗಳು ಕಾಣೆಯಾಗಿದ್ದವು. ಹೀಗಾಗಿ ಎಲ್ಲ ದಿಕ್ಕಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಕಾಣೆಯಾಗಿದ್ದ ಇನ್ಸಾಸ್ ರೈಫಲ್‌ಗಳು ಮತ್ತು ಗುಂಡುಗಳು ಬುಧವಾರ ಪತ್ತೆಯಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಭೂಸೇನಾ ಮುಖ್ಯಸ್ಥ ಜ|ಮನೋಜ್ ಪಾಂಡೆ ಅವರು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರಿಗೆ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ತನಿಖೆ ನಡೆಸುತ್ತಿರುವ ಭಟಿಂಡಾ ಎಸ್‌ಪಿ ಅಜಯ್ ಗಾಂಧಿ, “ಸ್ಥಳದಲ್ಲಿ ಇನ್ಸಾಸ್ ರೈಫಲ್‌ನ 19 ಖಾಲಿ ಶೆಲ್‌ಗಳು ದೊರೆತಿವೆ’ ಎಂದಿದ್ದಾರೆ.
ಕರ್ನಾಟಕ, ತಮಿಳುನಾಡಿನ ಯೋಧರು
ಹತರಾದ ನಾಲ್ವರು ಯೋಧರು ಕೂಡ 20ರ ಆಸುಪಾಸಿನ ವಯಸ್ಸಿನವರು. ಹತ್ಯೆಕೋರರು ಕೊಲೆ ಗೈದು ಪರಾರಿಯಾಗುತ್ತಿದ್ದ ಸಮಯದಲ್ಲೇ ಅವರು ಶಿಬಿರದಲ್ಲಿದ್ದ ಮತ್ತೂಬ್ಬ ಯೋಧನ ಕಣ್ಣಿಗೆ ಬಿದ್ದಿದ್ದಾರೆ. ಈ ಯೋಧ ಇತರರಿಗೆ ವಿಚಾರ ತಿಳಿಸಿದ್ದು, ಶಿಬಿರದೊಳಗೆ ಹೋಗಿ ನೋಡಿದಾಗ ಒಂದು ಕೊಠಡಿಯಲ್ಲಿ ಸಾಗರ್ ಅಪ್ಪಾ ಸಾಹೇಬ ಬನ್ನೆ (25) ಮತ್ತು ಯೋಗೇಶ್ ಕುಮಾರ್ ಜೆ. (24) ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮತ್ತೂಂದು ಕೊಠಡಿಯಲ್ಲಿ ಸಂತೋಷ್ ಎಂ. ನಾಗರಾಳ (25) ಮತ್ತು ಕಮಲೇಶ್ ಆರ್. (24) ಅವರ ಮೃತದೇಹ ಪತ್ತೆಯಾಗಿದೆ. ಮೃತರಲ್ಲಿ ಸಂತೋಷ್ ಮತ್ತು ಸಾಗರ್ ಕರ್ನಾಟಕದವರಾದರೆ ಮತ್ತಿಬ್ಬರು ತಮಿಳುನಾಡಿನವರು ಎಂದು ಸೇನಾ ಮೂಲಗಳು ತಿಳಿಸಿವೆ.