Advertisement

ಮೈದುಂಬಿ ಧುಮ್ಮುಕ್ಕುತ್ತಿರುವ ಭರಚುಕ್ಕಿ

10:29 AM Jul 29, 2019 | Suhan S |

ಚಾಮರಾಜನಗರ: ಕೃಷ್ಣರಾಜ ಸಾಗರ ಹಾಗೂ ಕಬಿನಿ ಜಲಾಶಯದಿಂದ 12 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿರುವ ಕಾರಣ ಜಿಲ್ಲೆಯ ಪ್ರಸಿದ್ಧ ಭರಚುಕ್ಕಿ ಜಲಪಾತ ಮೈದುಂಬಿಕೊಂಡಿದ್ದು ಜಲಧಾರೆ ಬೆಳ್ನೊರೆಯಾಗಿ ಧುಮ್ಮಿಕ್ಕುತ್ತಿದೆ.

Advertisement

ಮಳೆಗಾಲ ಆರಂಭವಾದರೂ, ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದೆ. ಆದರೆ ಕಾವೇರಿ, ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಹಾಗಾಗಿ ಕೃಷ್ಣರಾಜ ಸಾಗರ ಸುಮಾರು 7 ಸಾವಿರ ಕ್ಯೂಸೆಕ್‌ ಹಾಗೂ ಕಬಿನಿ ಜಲಾಶಯದಿಂದ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಹೀಗಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

100 ಅಡಿ ಆಳಕ್ಕೆ ಧುಮ್ಮಿಕ್ಕುವ ಕಾವೇರಿ: ಹೀಗಾಗಿ, ಭರಚುಕ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಸೊರಗಿದ್ದ ಜಲಪಾತ ಮೈದುಂಬಿಕೊಂಡಿದೆ. ಕೇರಳದ ವೈನಾಡಿನಲ್ಲಿ ಹುಟ್ಟಿ ಹರಿಯುವ ಕಪಿಲಾ, ತಲಕಾವೇರಿಯಲ್ಲಿ ಜನ್ಮ ತಾಳಿ ಹರಿದುಬರುವ ಕಾವೇರಿ ನದಿಗಳು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಸಂಗಮವಾಗುತ್ತವೆ. ನಂತರ ಕಬಿನಿ ಕಾವೇರಿ ಒಡಲಲ್ಲಿ ಸೇರಿ ಹೋಗುತ್ತಾಳೆ. ಈ ಕಾವೇರಿ ಜಿಲ್ಲೆಯ ಶಿವನಸಮುದ್ರ ಪ್ರದೇಶದಲ್ಲಿ ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುತ್ತಾಳೆ. ಈ ಪ್ರದೇಶ ಭರಚುಕ್ಕಿಯಾಗಿ ಪ್ರಸಿದ್ಧವಾಗಿದೆ.

ಕರ್ನಾಟಕದ ನಯಾಗರಾ: ಸುಮಾರು 100 ಅಡಿ ಆಳಕ್ಕೆ ಧುಮ್ಮಿಕ್ಕುವ ಭರಚುಕ್ಕಿ, ಅಷ್ಟೇ ಅಗಲದ ಪ್ರದೇಶದಲ್ಲಿ ಅನೇಕ ಕವಲುಗಳೊಡೆದು ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚು ನೀರು ಹರಿದಾಗ ಈ ಕವಲುಗಳ ಸಂಖ್ಯೆ ಹೆಚ್ಚಾಗಿ 100 ಅಡಿ ಅಗಲಕ್ಕೂ ಜಲಪಾತ ಮೈತುಂಬಿಕೊಳ್ಳುತ್ತದೆ. ಹೀಗಾಗಿ ಇದನ್ನು ಕರ್ನಾಟಕದ ನಯಾಗರ ಎಂದು ಬಣ್ಣಿಸಲಾಗುತ್ತದೆ.

ಜಲಪಾತ ನೋಡುಗರ ಕಣ್ಣಿಗೆ ಹಬ್ಬ: ಬಣ್ಣವಿಲ್ಲದೆ ಹರಿಯುವ ಸಲಿಲ ಜಲಧಾರೆ ಜಲಪಾತವಾಗುವಾಗ ಅಚ್ಚ ಬಿಳಿಯ ಬಣ್ಣದಲ್ಲಿ ಬೃಹತ್‌ ಪ್ರಮಾಣದ ಜಲಧಾರೆಯಾಗಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಮೈನವಿರೇಳಿಸುತ್ತದೆ. ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸಂಪೂರ್ಣ ಮೋಡಕವಿದ ವಾತಾವರಣ, ಆಗಾಗ ತುಂತುರು ಮಳೆ ಬೀಳುತ್ತಿದ್ದು, ಭರಚುಕ್ಕಿಯಲ್ಲಿ ಈ ವಾತಾವರಣದಲ್ಲಿ ಜಲಪಾತ ನೋಡುವುದು ಕಣ್ಣಿಗೆ ಹಬ್ಬವಾಗಿದೆ. ಜಲಾನಯದ ಪ್ರದೇಶದಲ್ಲಿ ಮಳೆ ಹೀಗೇ ಮುಂದುವರಿದರೆ ಎರಡೂ ಜಲಾಶಯಗಳಲ್ಲಿ ಇನ್ನಷ್ಟು ನೀರಿನ ಮಟ್ಟ ಹೆಚ್ಚಾಗಿ ನದಿಗೆ ಇನ್ನೂ ಹೆಚ್ಚಿನ ನೀರು ಬಿಡಲಾಗುತ್ತದೆ. ಆಗ ಭರಚುಕ್ಕಿ ಜಲಪಾತದ ವೈಭವ ಇನ್ನಷ್ಟು ಹೆಚ್ಚಲಿದೆ.

ವಾರಾಂತ್ಯ ಪ್ರವಾಸಿಗರ ಹೆಚ್ಚಳ:

ಜಲಪಾತದ ವೈಭವ ಮರುಕಳಿಸಿರುವುದನ್ನು ನೋಡಲು ಜನರು ಒಂದು ವಾರದಿಂದ ಜಲಪಾತಕ್ಕೆ ಬರಲಾರಂಭಿಸಿದ್ದಾರೆ. ಶನಿವಾರ ಭಾನುವಾರ ಪ್ರವಾಸಿಗರ ಸಂಖ್ಯೆ ಗಣನೀಯ ವಾಗಿ ಹೆಚ್ಚಳವಾಗಿದೆ. ನಾಲ್ಕನೇ ಶನಿವಾರದ ರಜೆ ಹಾಗೂ ಭಾನುವಾರದ ರಜೆ ಇದ್ದ ಕಾರಣ ಪ್ರವಾಸಿಗರು ತಮಿಳುನಾಡು, ಮುಂಬಯಿ, ಬೆಂಗಳೂರು ಸೇರಿದಂತೆ ರಾಜ್ಯ ವಿವಿಧೆಡೆಗಳಿಂದ ಆಗಮಿಸಿದ್ದರು. ಸತ್ತೇಗಾಲ ರಸ್ತೆಯಿಂದ ಶಿವನಸಮುದ್ರ, ಭರಚುಕ್ಕಿ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಉಂಟಾಗಿ, ಪೊಲೀಸರು ಸಂಚಾರ ಸುವ್ಯವಸ್ಥಿತಗೊಳಿಸಲು ಪರದಾಡುವಂತಾಯಿತು. ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ, ಭರಚುಕ್ಕಿಯ ಮೇಲ್ಭಾಗದಿಂದ ನದಿ ಭಾಗಕ್ಕೆ ಹೋಗುವ ಮಾರ್ಗವನ್ನು ಮುಚ್ಚಲಾಗಿದೆ. ಪ್ರವಾಸಿಗರು ಕೆಳಗೆ ಹೋಗದಂತೆ ನಿಷೇಧಿಸಲಾಗಿದೆ.
● ಕೆ.ಎಸ್‌. ಬನಶಂಕರ ಆರಾಧ್ಯ
Advertisement
Advertisement

Udayavani is now on Telegram. Click here to join our channel and stay updated with the latest news.

Next