Advertisement

ರೈತನ ಕೈ ಹಿಡಿದ ಭರ್ಮಾ ಬ್ಲಾಕ್‌ ತಳಿಯ ಭತ್ತ!

03:10 PM Jan 11, 2018 | Team Udayavani |

ಸಿರುಗುಪ್ಪ: ಭತ್ತದ ನಾಡು ಎಂದೇ ಪ್ರಸಿದ್ಧಿ ಪಡೆದ ಸಿರುಗುಪ್ಪ ತಾಲೂಕಿನ ರೈತರು ಕೃಷಿಯಲ್ಲಿ ಒಂದಲ್ಲಾ ಒಂದು ರೀತಿಯ ಹೊಸ ತಳಿಯ ಪ್ರಯೋಗಗಳ ಕಣಜವಾಗಿದೆ. ತಾಲೂಕಿನ ಹಾವಿನಾಳು ಗ್ರಾಮದ ಪ್ರಗತಿಪರ ರೈತ ಸಿದ್ದರಾಮಗೌಡರು ತಮ್ಮ 1.5 ಎಕರೆ ಹೊಲದಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡು ಭರ್ಮಾ ಬ್ಲಾಕ್‌ ಭತ್ತದ ತಳಿಯ ಬೆಳೆ  ಬೆಳೆದಿದ್ದಾರೆ.

Advertisement

ಭರ್ಮಾ ತಳಿಯ ಭತ್ತವನ್ನು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕರವಾಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವಾತಾವರಣ ಶೇ.20 ಡಿಗ್ರಿಯಿಂದ 25 ಡಿಗ್ರಿ ಸೆಲ್ಸಿಯಸ್‌ ಇರುವ ತಂಪಾದ ವಾತಾವರಣದಲ್ಲಿ ಈ ತಳಿಯ ಭತ್ತ ಬೆಳೆಯಲು ಅನುಕೂಲಕರವಾಗಿದೆ. ಆದರೆ ಬಿಸಿಲನಾಡು ಬಳ್ಳಾರಿಯಲ್ಲಿ 35 ಡಿಗ್ರಿಯಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಇದ್ದರೂ ಭರ್ಮಾ ಬ್ಲಾಕ್‌ ತಳಿಯ ಭತ್ತವನ್ನು ಈ ರೈತ ಬೆಳೆದಿದ್ದಾನೆ. ಸಕಲೇಪುರದ ಸ್ವಾಮಿ ಎಂಬ ರೈತನಿಂದ 25 ಕೆ.ಜಿ. ಬೀಜ ಖರೀದಿಸಿದ ಹಾವಿನಾಳು ಗ್ರಾಮದ ಪ್ರಗತಿಪರ ರೈತ ಸಿದ್ದರಾಮಗೌಡರು ತಮ್ಮ 1.5 ಎಕರೆ ಜಮೀನಿನಲ್ಲಿ
ಕೂರಿಗೆ ತಳಿಯಿಂದ ಬಿತ್ತನೆ ಮಾಡಿದ್ದು, ಎರೆಹುಳು ಗೊಬ್ಬರ, ಪಂಚಗವ್ಯ, ಬೇವಿನ ಕಷಾಯ, ಜೀವಾಮೃತ ಬಳಸಿ ಸಾವಯವ ಕೃಷಿಯಲ್ಲಿ ಭತ್ತ ಬೆಳೆದಿದ್ದಾರೆ.

ಇದರಿಂದಾಗಿ ಬೆಳೆಯು ಉತ್ತಮವಾಗಿ ಬೆಳೆದಿದ್ದು, 1.5 ಎಕರೆಯಲ್ಲಿ 15 ಚೀಲ ಭತ್ತ ಬೆಳೆದಿದ್ದು, ಆ ಭತ್ತದಿಂದ ಅಕ್ಕಿ ತಯಾರಿಸಲು ಈ ರೈತ ಒಟ್ಟು 12 ಸಾವಿರ ರೂ. ಖರ್ಚು ಮಾಡಿದ್ದಾನೆ. ಮಾರುಕಟ್ಟೆಯಲ್ಲಿ ಈ ಅಕ್ಕಿಗೆ ಭಾರಿ ಬೇಡಿಕೆ ಇದ್ದು, 1 ಕೆ.ಜಿ.ಗೆ 300 ರೂ. ದರವಿದೆ. 6 ಕ್ವಿಂಟಲ್‌ ಅಕ್ಕಿ ಮಾರಾಟದಿಂದ 1 ಲಕ್ಷ ರೂ. ಆದಾಯ ಬರಲಿದ್ದು, ಇದರಲ್ಲಿ ರೈತ ಸಿದ್ದರಾಮನಗೌಡನಿಗೆ ನಿವ್ವಳ ಲಾಭ 88 ಸಾವಿರ ರೂ. ಬಂದಿದೆ. ಭರ್ಮಾ ತಳಿಯ ಭತ್ತವನ್ನು 1.5 ಎಕರೆಯಲ್ಲಿ ಬೆಳೆದಿದ್ದು, 15 ಚೀಲ ಭತ್ತದ ಇಳುವರಿ ಬಂದಿದೆ. ಭತ್ತವನ್ನು ಅಕ್ಕಿ ಮಾಡಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಂಡಿರುವುದರಿಂದ ಉತ್ತಮ ಲಾಭ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ರೈತ ಸಿದ್ದರಾಮನಗೌಡ ತಿಳಿಸಿದ್ದಾರೆ.

ಸೋನಾಮಸೂರಿ ಭತ್ತದ ಬೆಲೆ ಕುಸಿತ
ಸಿರುಗುಪ್ಪ: ಸೋನಾ ಮಸೂರಿ ಭತ್ತಕ್ಕೆ ಬೇಡಿಕೆಯಿಲ್ಲದೆ ಬೆಲೆ ಕುಸಿದ ಪರಿಣಾಮ ಸೋನಾ ಮಸೂರಿ ಭತ್ತ ಬೆಳೆದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ವರ್ಷ ಬೇಡಿಕೆ ಹೆಚ್ಚಿದ್ದರಿಂದ ಸೋನಾ ಮಸೂರಿ ಭತ್ತವನ್ನು ಈ ವರ್ಷ ತಾಲೂಕಿನಲ್ಲಿ ಸುಮಾರು 35 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ. ಆದರೆ ಬೆಲೆ ಕುಸಿತದಿಂದ ರೈತರನ್ನು ಕಂಗಾಲಾಗಿಸಿದೆ. ಕಳೆದ ವರ್ಷ ಸೋನಾ ಮಸೂರಿ ಕ್ವಿಂಟಲ್‌ ಭತ್ತಕ್ಕೆ 2,200 ರೂ. ಬೆಲೆ ಇತ್ತು. ಆದರೆ ಈ ಬಾರಿ ಕ್ವಿಂಟಲ್‌ಗೆ 1,900 ರೂ. ಬೆಲೆ ಇದೆ. ಹೀಗಾಗಿ ಖರ್ಚಿಗಿಂತ ಇನ್ನೂ ಹೆಚ್ಚಿನ ಖರ್ಚು ಬರುತ್ತಿದೆ. ಕಳೆದ
ವರ್ಷ ಸೋನಾ ಮಸೂರಿ ಭತ್ತ ಖರೀದಿಸಲು ನೆರೆ ರಾಜ್ಯ ಸೀಮಾಂಧ್ರ, ಆಂಧ್ರ, ತಮಿಳುನಾಡಿನಿಂದ ವ್ಯಾಪಾರಸ್ಥರು ಬರುತ್ತಿದ್ದರು. ಆದರೆ ಈ ವರ್ಷ ಬೆಲೆ ಕುಸಿತದಿಂದ ವ್ಯಾಪಾರಿಗಳು ಇತ್ತ ಮುಖ ಮಾಡುತ್ತಿಲ್ಲ. ಇದರಿಂದ ರೈತರನ್ನು ಮತ್ತಷ್ಟು ಆತಂಕ ಉಂಟು ಮಾಡಿದೆ. ಆದರೆ ಆರ್‌ಎನ್‌ಆರ್‌ ಭತ್ತದ ತಳಿಯ ಭತ್ತಕ್ಕೆ ತಾಲೂಕಿನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕ್ವಿಂಟಲ್‌ಗೆ 2100 ರಿಂದ 2170 ರೂ.ವರೆಗೆ ಖರೀದಿಸುತ್ತಿದ್ದು, ವ್ಯಾಪಾರಸ್ಥರು ಹೊಲದಲ್ಲೇ ಭತ್ತ ಖರೀದಿ ಮಾಡುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಆದರೆ ಸೋನಾ ಮಸೂರಿ ಭತ್ತಕ್ಕೆ ಬೇಡಿಕೆ ಇಲ್ಲದಂತಾಗಿದ್ದು, ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ.

ಭರ್ಮಾ ಬ್ಲಾಕ್‌ ಭತ್ತದ ಕಪ್ಪು ಅಕ್ಕಿಯು ತಿನ್ನಲು ಆರೋಗ್ಯಕರವಾಗಿದ್ದು, ಔಷಧಿ ಗುಣ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಾಗಿದೆ. ಇಂತಹ ಭತ್ತದ ತಳಿಯನ್ನು ಬೆಳೆಯಲು ತಾಲೂಕಿನ ರೈತರು ಮುಂದಾದರೆ, ಅವರಿಗೆ ತಾಂತ್ರಿಕ ಸಲಹೆ ಕೊಡುವ ವ್ಯವಸ್ಥೆ ಮಾಡಲಾಗುವುದು. 
ಡಾ| ಪಾಲಾಕ್ಷಿಗೌಡ, ತಾಲೂಕು ಸಹಾಯಕ ಕೃಷಿ ನಿದೇರ್ಶಕ 

Advertisement

ಕಪ್ಪು ಅಕ್ಕಿ ಪ್ರಾಚೀನ ಧಾನ್ಯವಾಗಿದೆ. ಈ ಅಕ್ಕಿ ತಿನ್ನುವುದರಿಂದ ಮಧುಮೇಹ, ಕ್ಯಾನ್ಸರ್‌, ಹೃದಯ ಕಾಯಿಲೆ, ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯವಾಗುತ್ತದೆ.
ಡಾ| ಎಂ.ಎ.ಬಸವಣ್ಣೆಪ್ಪ, ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ, ಸಿರುಗುಪ್ಪ.

Advertisement

Udayavani is now on Telegram. Click here to join our channel and stay updated with the latest news.

Next