Advertisement

ಕೊಂಕಣಿಯಲ್ಲಿ ಭಾರ್ಗವ ವಿಜಯ

07:42 PM Apr 18, 2019 | Team Udayavani |

ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘ ( ರಿ. ) ಮಂಗಳೂರು ಇದರ ಸದಸ್ಯರು ಕೊಂಕಣಿ ಭಾಷೆಯಲ್ಲಿ ಪ್ರದರ್ಶಿಸಿದ ಭಾರ್ಗವ ವಿಜಯ ಉತ್ತಮವಾಗಿ ಪ್ರಸ್ತುತಗೊಂಡಿತು . ಕನ್ನಡ ಹೊರತು ಪಡಿಸಿ ಇತರ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಗೊಂಡಾಗ ಸ್ವಲ್ಪ ಮಟ್ಟಿನ ಭಿನ್ನತೆ , ಗೊಂದಲ ಕಾಣವುದು ಸಹಜ . ಆದರೆ ಕೊಂಕಣಿ ಭಾಷೆಯಲ್ಲಿ ಪ್ರದರ್ಶನಗೊಂಡ ಭಾರ್ಗವ ವಿಜಯ ಈ ಎಲ್ಲಾ ಭಿನ್ನತೆಯನ್ನು ಮೀರಿ ಪ್ರದರ್ಶನಗೊಂಡಿತು.

Advertisement

ಪತ್ನಿಯಾದ ರೇಣುಕೆಯ ಪಾತಿವ್ರತ್ಯದ ಬಗ್ಗೆ ಶಂಕಿತಗೊಂಡ ಜಮದಗ್ನಿ ಮಹರ್ಷಿಯು ಮಗನಾದ ಪರಶುರಾಮನಿಂದಲೇ ,ಪತ್ನಿಯ ರುಂಡ ಕತ್ತರಿಸುತ್ತಾನೆ . ನಂತರ ಪರಶುರಾಮನ ಅಪೇಕ್ಷೆಯಂತೆ ರೇಣುಕೆಯನ್ನು ಬದುಕಿಸಿ ತನ್ನ ಕೋಪ ವನ್ನು ತ್ಯಜಿಸುತ್ತಾನೆ.

ಮಾಹಿಷ್ಮತಿಯ ಚಕ್ರವರ್ತಿಯಾದ ಕಾರ್ತ್ಯ ಬೇಟೆಗೆಂದು ಬಂದಾಗ ಜಮದಗ್ನಿ ಮಹರ್ಷಿಗಳ ಅಪೇಕ್ಷೆಯಂತೆ ಪರಿವಾರ ಸಹಿತ ಸುಗ್ರಾಸ ಭೋಜನ ಸ್ವೀಕರಿಸುತ್ತಾನೆ. ಇದಕ್ಕೆಲ್ಲ ಕಾರಣ , ಜಮದಗ್ನಿಯ ಬಳಿ ಇರುವ ದೇವೇಂದ್ರನಿಂದ ಕೊಡಲ್ಪಟ್ಟ ಧೇನುವೆಂದು ಅರಿತು ಅದನ್ನು ಬಲಾತ್ಕಾರವಾಗಿ ಕೊಂಡೊಯ್ಯುತ್ತಾನೆ . ದುಃಖೀತನಾದ ಜಮದಗ್ನಿಯನ್ನು ಕಂಡು ಪರಶುರಾಮನು ಕಾರ್ತ್ಯನನ್ನು ಸಂಹರಿಸಿ ಧೇನುವನ್ನು ಮರಳಿ ಪಡೆಯುತ್ತಾನೆ .ಇವಿಷ್ಟು ಕಥಾನಕವನ್ನೊಳಗೊಂಡ ಭಾರ್ಗವ ವಿಜಯ ಎರಡೂವರೆ ತಾಸಿನ ಕಾಲಮಿತಿಯಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು.

ಹವ್ಯಾಸಿ ಕಲಾವಿದರಾದ ಕೊಂಕಣಿ ಸಾಂಸ್ಕೃತಿಕ ಸಂಘದ ಸದಸ್ಯರೇ ಭೂಮಿಕೆಯಲ್ಲಿ ಕಾಣಿಸಿಕೊಂಡರು. 15 ರಿಂದ 70ರ ವಯಸ್ಸಿನ ಸದಸ್ಯರು ಉತ್ಸಾಹದಿಂದ ಪಾತ್ರ ನಿರ್ವಹಿಸಿದರು. ಪೂರ್ವಾರ್ಧದ ಜಮದಗ್ನಿಯಾಗಿ ಎಂ.ಆರ್‌.ಕಾಮತ್‌ ಹಾಗೂ ಉತ್ತರಾರ್ಧದಲ್ಲಿ ನಿವೇದಿತಾ ಪ್ರಭು , ರೇಣುಕೆಯಾಗಿ ಹಿರಿಯ ಕಲಾವಿದೆ ಪ್ರಫ‌ುಲ್ಲಾ ಹೆಗ್ಡೆ , ಕೋಪ ದ ಪಾತ್ರದಲ್ಲಿ ಭೀಮನಮುಡಿ ಧರಿಸಿ ಎಂ.ಶ್ರೀನಿವಾಸ ಕುಡ್ವ ಮಿಂಚಿದರು . ಭಾರ್ಗವನಾಗಿ ಹನುಮಗಿರಿ ಮೇಳದ ಪ್ರಸಿದ್ಧ ಪುಂಡುವೇಷಧಾರಿಯಾದ ಪ್ರಕಾಶ್‌ ನಾಯಕ್‌ ನೀರ್ಚಾಲ್‌ರವರು ಯಕ್ಷಗಾನದ ವಿವಿಧ ಪರಂಪರೆಯ ನಾಟ್ಯ ವೈವಿಧ್ಯದ ಮೂಲಕ ಕರತಾಡನಕ್ಕೆ ಪಾತ್ರರಾದರು. ಕಾರ್ತ್ಯನಾಗಿ ಸಾಣೂರು ಮೋಹನದಾಸ್‌ ಪ್ರಭು ರಾಜವೇಷದ ಗಾಂಭೀರ್ಯಕ್ಕೆ ಕಳೆ ತಂದರು. ಕಿರಾತಪಡೆಯ ಮುಖಂಡನಾಗಿ ಎಂ.ಶಾಂತರಾಮ ಕುಡ್ವರು ಪಾರಂಪರಿಕ ಹಾಸ್ಯದ ಮೂಲಕ ರಸಿಕರ ಮನ ಸೂರೆಗೊಂಡರು. ಶತ್ರುಜಿತುವಾಗಿ ಗಜಾನನ ಶೆಣೈ ಹಾಗೂ ಕಾಲಜ್ಞನಾಗಿ ಗುರುಮೂರ್ತಿಯವರು ಉತ್ತಮ ನಿರ್ವಹಣೆ ನೀಡಿದರು . ಜಮದಗ್ನಿಯ ಮಕ್ಕಳಾಗಿ ವೈದ್ಯ ಡಾ| ಸುದೇಶ್‌ ರಾವ್‌, ಗೋವಿಂದರಾಯ ಪ್ರಭು, ಕೇಶವ ಕಾಮತ್‌ ಹಾಗೂ ಕು|ವೈಶಾಲಿಯವರು ಉತ್ತಮ ಕುಣಿತದ ಮೂಲಕ ರಂಜಿಸಿದರು . ಕಿರಾತ ಪಡೆಯವರಾಗಿ ಪ್ರಭಾ ಭಟ್‌, ಪ್ರವೀಣ್‌ ಕಾಮತ್‌, ದೀಪಾ ಕಾಮತ್‌, ಅರುಣಾ ಪ್ರಭು, ಮಾ| ಕಾರ್ತಿಕ್‌ ಹಾಗೂ ಮಾ| ಹೃತಿಕ್‌ರವರು ಶಾಂತರಾಮ ಕುಡ್ವರ ಹಾಸ್ಯರಸೋತ್ಕರ್ಷೆಗೆ ಪೂರಕವಾದರು. ಹಿಮ್ಮೇಳದಲ್ಲಿ ದಯಾನಂದ ಕೋಡಿಕ್ಕಲ್‌ , ರಾಮ ಹೊಳ್ಳ , ಕೃಷ್ಣರಾಜ್‌ ಹಾಗೂ ಶ್ರೀಕಾಂತ್‌ ಸಹಕರಿಸಿದರು.

ಎಂ.ಗಿರಿಧರ್‌ ಪಿ.ನಾಯಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next