Advertisement

ತಂದೆಗೆ ತಕ್ಕ ಮಗ

10:03 AM Dec 14, 2019 | mahesh |

ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ ಕುಟುಂಬದ ನೆರಳಿನಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ. ಇದನ್ನು ನಮ್ಮ ಸಮಾಜ ಕೂಡ ಒಪ್ಪುತ್ತದೆ. ಆದರೆ ಅದೇ ರೌಡಿಸಂ ಮಾಡುತ್ತಿರುವ ತಂದೆಯ ಹೆಸರಿನಲ್ಲಿ ಮಗ ಕೂಡ ರೌಡಿಸಂಗೆ ಇಳಿದರೆ ಏನಾಗಬಹುದು? ಒಳ್ಳೆಯ ಮಾರ್ಗಗಳಲ್ಲಿ ಸಿಕ್ಕಂತೆ ತಂದೆಯ ಹೆಸರು, ಕುಟುಂಬದ ನೆರಳು ಕೆಟ್ಟ ಕೆಲಸ ಮಾಡುವ ಮಕ್ಕಳಿಗೂ ಸಿಗುತ್ತದೆಯಾ? ಹಾಗೇನಾದರೂ ಸಿಕ್ಕರೆ ಅವರ ಭವಿಷ್ಯ ಏನಾಗುತ್ತದೆ? ಈಗ ಇದೇ ವಿಷಯವನ್ನು ಕಥೆಯಾಗಿ ಇಟ್ಟುಕೊಂಡು ಬಹುತೇಕ ಹೊಸಬರು “ಭಾರ್ಗವ’ ಎನ್ನುವ ಹೆಸರಿನಲ್ಲಿ ಚಿತ್ರವನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ.

Advertisement

ಇನ್ನು ಈ ಚಿತ್ರಕ್ಕೆ “ಭಾರ್ಗವ’ ಎಂದು ಹೆಸರಿಡಲು ಕೂಡ ಸಕಾರಣವಿದೆಯಂತೆ. ಪರುಶುರಾಮನಿಗೆ ಮತ್ತೂಂದು ಹೆಸರು “ಭಾರ್ಗವ’. ಅವನು ತಂದೆ ಮಾತಿನಂತೆ ನಡೆದುಕೊಳ್ಳುತ್ತಾನೆ. ಈ ಚಿತ್ರದಲ್ಲೂ ಕೂಡ ನಾಯಕ ತನ್ನ ತಂದೆಯ ಮಾತಿನಂತೆ ನಡೆದುಕೊಂಡು, ತಂದೆಯ ಪರವಾಗಿ ಹೋರಾಡುತ್ತಾನಂತೆ. ಹಾಗಾಗಿ ಚಿತ್ರಕ್ಕೆ “ಭಾರ್ಗವ’ ಎಂದು ಹೆಸರಿಟ್ಟಿದ್ದೇವೆ ಎನ್ನುವ ವಿವರಣೆ ನೀಡುತ್ತದೆ ಚಿತ್ರತಂಡ.

ಆಂಧ್ರ ಮೂಲದ ವೆಂಕಟ್‌ “ಭಾರ್ಗವ’ ಚಿತ್ರದಲ್ಲಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಕೋಲ್ಕತ್ತಾ ಮೂಲದ ದೀಪಿಕಾ ರಾಯ್‌ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶೋಭರಾಜ್‌, ಸಾಧು ಕೋಕಿಲ, ಮಳವಳ್ಳಿ ಸಾಯಿಕೃಷ್ಣ, ಜಮಿನಿಕಾಂತ್‌, ರಾಜು, ನಜೀರ್‌ ಮುಂತಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ “ಹುಲಿದುರ್ಗ’ ಎಂಬ ಚಿತ್ರವನ್ನು ನಿರ್ದೇಶಿಸಿರುವ ವಿಕ್ರಂ ಯಶೋಧರ, “ಭಾರ್ಗವ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

“ತಂದೆಯಾದವನು ಮಗನನ್ನು ಯಾವ ರೀತಿ ಸಾಕಬೇಕು ಎಂದು ಹೇಳುವುದೇ ಕತೆಯ ತಿರುಳಾಗಿದೆ. ಅದು ಹೇಗೆ ನಡೆಯುತ್ತದೆ ಎಂಬುದನ್ನು ಸನ್ನಿವೇಶಗಳ ಮೂಲಕ ಹೇಳುತ್ತಿದ್ದೇವೆ. ಚಿತ್ರವು ಬೆಂಗಳೂರಿನಲ್ಲಿ ಪ್ರಾರಂಭವಾಗಿ, ಬೆಂಗಳೂರಿನಲ್ಲೇ ಮುಕ್ತಾಯವಾಗಲಿದೆ. ಉಳಿದಂತೆ ದುಬೈ, ಮುಂಬೈ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲು ಪ್ಲಾನ್‌ ಮಾಡಿಕೊಳ್ಳಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯದಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಇದೆ’ ಎನ್ನುವ ಮಾಹಿತಿ ನೀಡುತ್ತಾರೆ ನಿರ್ದೇಶಕ ವಿಕ್ರಂ ಯಶೋಧರ. “ಹೆಚ್‌.ಎಸ್‌. ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ಪರಿಟಾಲ ಸುನೀಲ್‌ ಕುಮಾರ್‌ ಮತ್ತು ಅಮ್ಮಿನೇನಿ ಹರೀಶ್‌ ಜಂಟಿಯಾಗಿ ನಿರ್ಮಿಸುತ್ತಿರುವ “ಭಾರ್ಗವ’ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಸುಭಾಶ್‌ ಆನಂದ್‌ ಸಂಗೀತ ಸಂಯೋಜಿಸುತ್ತಿದ್ದು, ಡಾ. ವಿ ನಾಗೇಂದ್ರ ಪ್ರಸಾದ್‌ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶ್ಯಾಂ ಸಿಂಧನೂರ್‌ ಛಾಯಾಗ್ರಹಣ, ಕುಂಗು-ಫ‌ು ಚಂದ್ರು ಸಾಹಸ ಸಂಯೋಜನೆ ಇದೆ. ಇತ್ತೀಚೆಗಷ್ಟೆ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡಿರುವ “ಭಾರ್ಗವ’ ಸದ್ಯ ಚಿತ್ರೀಕರಣದತ್ತ ಮುಖ ಮಾಡಿದ್ದು, ತೆರೆಮೇಲೆ “ಭಾರ್ಗವ’ನ ಅಬ್ಬರ ಹೇಗಿರುತ್ತದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next