ಮಡಿಕೇರಿ: ಕುಶಾಲನಗರದ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ 7ನೇ ವರ್ಷದ ಕಾವೇರಿ ಪುಣ್ಯತೀರ್ಥ ವಿತರಣಾ ಕಾರ್ಯಕ್ರಮ ಕುಶಾಲನಗರ ಕೊಪ್ಪ ಗೇಟ್ ಬಳಿಯಿರುವ ಕಾವೇರಿ ದೇಗುಲದಲ್ಲಿ ನಡೆಯಿತು.
ಪೂಜಾ ಕೈಂಕರ್ಯಗಳ ಅನಂತರ ಇಬ್ಬರು ಹಿರಿಯರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಹಾಗೂ ಪತ್ರಕರ್ತ ಬಿ.ಆರ್.ನಾರಾಯಣ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಪ್ಪಣ್ಣ, ಕಾವೇರಿ ಮಾತೆಯ ಉಗಮದ ಬಗ್ಗೆ ವಿವರಿಸಿದರು. ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಆಗಮಿಸುವ ಪ್ರವಾಸಿಗರು ಗಡಿ ಭಾಗದಲ್ಲಿರುವ ಪವಿತ್ರ ಶ್ರೀಕಾವೇರಿ ಸನ್ನಿಧಾನವನ್ನು ವೀಕ್ಷಿಸಿ ಕಾವೇರಿ ಮಾತೆಯ ಆಶೀರ್ವಾದ ಪಡೆದು ನಂತರ ಕೊಡಗನ್ನು ಪ್ರವೇಶಿಸುವ ಪುಣ್ಯವನ್ನು ಹೊಂದಿದ್ದಾರೆ ಎಂದರು.
ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಮಾತನಾಡಿ ಶಾಂತ ಸ್ವರೂಪಿಣಿಯಾಗಿರುವ ಶ್ರೀಕಾವೇರಿ ಮಾತೆಯು ಕಳೆದೆರಡು ವರ್ಷಗಳಿಂದ ಪ್ರವಾಹದ ರೂಪದಲ್ಲಿ ಜನರಿಗೆ ಸಂಕಷ್ಟವನ್ನು ತಂದೊಡ್ಡಿದ್ದಾಳೆ. ಇನ್ನು ಮುಂದೆ ಈ ರೀತಿಯ ಅನಾಹುತಗಳು ನಡೆಯದಿರಲಿ ಎಂದು ಹೇಳಿದರು.
ಮಾನವ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟ ಅವರು ಪರಿಸರ ಜಾಗೃತಿಯ ಮಾತುಗಳನ್ನಾಡಿದರು.
ಎಸ್‌ಎಲ್‌ಎನ್ ಸಂಸ್ಥೆಯ ಮುಖ್ಯಸ್ಥರಾದ ಸಾತಪ್ಪನ್ ಹಾಗೂ ಕುಟುಂಬಸ್ಥರು, ಭಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಗೆಳೆಯರ ಬಳಗದ ಚಂದ್ರು, ಹರೀಶ್, ಜಬಿವುಲ್ಲಾ, ರುದ್ರೇಶ್, ಪರಮೇಶ್, ಗುತ್ತಿಗೆದಾರ ಚಂದ್ರು ಮತ್ತಿತರ ಪ್ರಮುಖರುಉಪಸ್ಥಿತರಿದ್ದರು ಬಳಿಕ ಅನ್ನಸಂತರ್ಪ ನಡೆಯಿತು.