Advertisement

ನೆರವಿಗೆ ಬಂದ ಭಾರತೀಯ ವಿಕಾಸ ಟ್ರಸ್ಟ್; ಯಕ್ಷ ಕಲಾವಿದನ ಬದುಕಲ್ಲಿ ಬೆಳಕು!

07:17 PM Dec 10, 2021 | Team Udayavani |

ಸಾಗರ: ಕಲಾವಿದರ ಸಂಕಷ್ಟದ ಬಗ್ಗೆ ಗಂಟಲ ಮೇಲಿನ ಮಾತುಗಳಿಂದ ಪ್ರಚಾರ ಗಿಟ್ಟಿಸುವ ಈ ಕಾಲದಲ್ಲಿ ಯಕ್ಷಗಾನದ ರಂಗು ರಂಗಿನ ವೇಷ ಭೂಷಣಗಳನ್ನು ಅಪರೂಪದ ಕಲಾವಿದನ ವಿದ್ಯುತ್ ಸಂಕಷ್ಟಕ್ಕೆ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ನೆರವಿಗೆ ನಿಂತ ದೃಷ್ಟಾಂತಕ್ಕೆ ಸಾಗರ ಸಾಕ್ಷಿಯಾಗಿದೆ.

Advertisement

ತಾಲೂಕಿನ ಬೆಳೆಯೂರಿನ ಸಂಜಯಕುಮಾರ ರಂಗನಾಥ ಅವರಿಗೆ ಸುಮಾರು 2.40 ಲ. ರೂ. ಮೌಲ್ಯದಲ್ಲಿ ಒಂದೂವರೆ ಕಿಲೋವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ಘಟಕ ಅಳವಡಿಸಿಕೊಳ್ಳುವಲ್ಲಿ ಈ ಸಂಸ್ಥೆ ನೆರವಾಗಿದೆ. ಈ ಮೂಲಕ ಸೂರ್ಯನ ಜೊತೆಗೆ ತಾನೂ ಕಲಾವಿದನ ಬಾಳಲ್ಲಿ ಬೆಳಕಾಗಿದೆ.

ಬೆಳೆಯೂರಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಗೆ ಎರಡು ನೂರು ವರ್ಷಗಳ ಅಧಿಕ ಇತಿಹಾಸವಿದೆ. ಈ ಮೇಳದಲ್ಲಿ 25 ವರ್ಷಗಳ ಕಾಲ ಸುದೀರ್ಘ ಯಜಮಾನರಾಗಿ ಕೆಲಸ ಮಾಡಿದ ರಂಗನಾಥ ಹಾಗೂ ಜಯಲಕ್ಷ್ಮೀ ಅವರ ಪುತ್ರ ಸಂಜಯ. ಇವರು ತಮ್ಮ 18ನೇ ವರ್ಷಕ್ಕೇ ಯಕ್ಷಗಾನದ ಗೆಜ್ಜೆ ಕಟ್ಟಿದವರು.

ಕೆರೆಮನೆ, ಕೊಂಡದಕುಳಿ, ಯಾಜಿ ಮೇಳಗಳಲ್ಲಿ ಕೆಲಸ ಮಾಡಿದವರು. ಬಲರಾಮ, ಕೌರವ, ಭೀಮ, ದುಷ್ಟಬುದ್ಧಿ, ವಾಲಿ, ಸುಗ್ರೀವ ಮತ್ತಿತರ ಪಾತ್ರಗಳ ಮೂಲಕ ಜನ ಮಾನಸದಲ್ಲಿ ನಿಂತವರು. ಪಾತ್ರವಾಗಲು ವೇಷ ಭೂಷಣಗಳೇ ತೊಡಕಾದಾಗ ಸ್ವತಃ ತಾವೇ ತಯಾರಿಸಿದರೆ ಹೇಗೆ ಎಂದು ಈ ಕೆಲಸಕ್ಕೆ ಅಡಿ ಇಟ್ಟು ೧೮ ವರ್ಷಗಳಾಗಿವೆ.

Advertisement

ಯಕ್ಷಗಾನದ ರಂಗು ರಂಗಿನ ವೇಷ ಭೂಷಣಗಳನ್ನು ಸಂಪ್ರದಾಯ ಬದ್ಧ ಕುಸುರಿಯ ಕಲಾ ಕೆತ್ತನೆಗಳನ್ನು ಬಳಸಿ ಮಾಡುವವರಲ್ಲಿ ಸಂಜಯ್ ಒಬ್ಬರು. ಯಕ್ಷಗಾನ ಕಲಾ ಮೇಳಗಳಿಗೆ, ಹವ್ಯಾಸಿ ಕಲಾವಿದರಿಗೆ ಸಂಪ್ರದಾಯ ಹಾಗೂ ಆಧುನಿಕ ಬಗೆಯ ಯಕ್ಷಗಾನ ವೇಷಭೂಷಣ ಮಾಡಿಕೊಡುತ್ತಿದ್ದಾರೆ. ಬೆಳೆಯೂರಿನ ವೇಷ ಭೂಷಣಗಳು ಅನಿವಾಸಿ ಭಾರತೀಯರಿಗೂ ತಲುಪಿದೆ. ಅಮೇರಿಕಾ, ಕೆನಡಾ, ಸಿಂಗಾಪುರ, ದುಬೈ, ಜರ್ಮನಿ ಸೇರಿದಂತೆ ಹಲವೆಡೆಯ ಕಲಾಸಕ್ತರೂ ಒಯ್ದಿದ್ದಾರೆ. ನಾಡಿನ ಪ್ರಸಿದ್ಧ ಕಲಾವಿದರಿಗೂ ಸಂಜಯಕುಮಾರರು ಸಿದ್ದಗೊಳಿಸುವ ವೇಷ ಭೂಷಣಗಳು ಎಂದರೆ ಬಹು ಇಷ್ಟ. ಇಂತಹ ನಾಜೂಕಿನ ಉದ್ಯಮ ನಡೆಸಲು ಪದೇ ಪದೇ ಕೈಕೊಡುವ ವಿದ್ಯುತ್ ಸಂಜಯ್‌ರಿಗೆ ಸಮಸ್ಯೆ ತಂದೊಡ್ಡಿತ್ತು. ಕಳೆದ ಎರಡು ವರ್ಷಗಳ ಕೋವಿಡ್ ಸಂಕಷ್ಟ ಪರ್ಯಾಯ ವಿದ್ಯುತ್‌ಗೆ ಬಂಡವಾಳ ಹಾಕಲೂ ಸಂಜಯರನ್ನು ಹೆದರುವಂತೆ ಮಾಡಿತ್ತು.

ಕಲಾವಿದನ ಪರಿಸ್ಥಿತಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಗಮನಕ್ಕೆ ಬಂತು. ಆ ಸಂಸ್ಥೆ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಸಂಜಯ್‌ರಿಗೆ ಭರವಸೆಯ ಹೊಸ ಬೆಳಕು ನೀಡಿತು. ಸುಮಾರು 2.40 ಲಕ್ಷ ರೂ. ಮೌಲ್ಯದಲ್ಲಿ ಆರು ಸೌರ ವಿದ್ಯುತ್ ಫಲಕಗಳು ಬಳಸಿ ಒಂದೂವರೆ ಕಿಲೋವ್ಯಾಟ್ ಸಾಮರ್ಥ್ಯದ ಸೌರ ಶಕ್ತಿಯ ಜೋಡಿಸಿಕೊಡುವ ಮೂಲಕ ಈ ಸಂಸ್ಥೆಗಳು ಸಂಜಯ್‌ರಿಗೆ ಬೆಳಕಾಗಿವೆ. ಅತ್ತ ಸೌರ ವಿದ್ಯುತ್ ಅಕ್ಷರಶಃ ಬೆಳಕನ್ನೂ ಸಂಜಯ್‌ರ ತಯಾರಿಕಾ ಕೇಂದ್ರವನ್ನು ಬೆಳಗಿದೆ.

ಯಾವುದೇ ಕಲೆಯನ್ನು ಉಳಿಸುವ ಮಾತು ಎಲ್ಲಾ ಕಡೆ ಕೇಳುತ್ತೇವೆ. ಅದಕ್ಕಿಂತ ಮುಖ್ಯ ವಾದದ್ದು ಅವುಗಳನ್ನು ಆಧುನಿಕ ಚಿಂತನೆಯಿಂದ ಹಾಗೂ ತಾಂತ್ರಿಕತೆಯಿಂದ ಇನ್ನೂ ಹೆಚ್ಚು ಸಶಕ್ತಗೊಳಿಸಬೇಕಾಗಿದೆ. ಸೌರ ಶಕ್ತಿ ಎಂದರೆ ಕೇವಲ ಬೆಳಕಲ್ಲ. ಆ ಶಕ್ತಿ ಬಳಸಿ ಪರ್ಯಾಯ ಬಳಕೆಯ ವಿಸ್ತಾರಕ್ಕೆ ಇದೊಂದು ಉದಾಹರಣೆ.
– ಹರೀಶ ಹಂದೆ, ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತರು

ಕೋವಿಡ್ ಕಾಲ ಘಟ್ಟದಲ್ಲಿ ಯಕ್ಷಗಾನ ಕಾರ್ಯಕ್ರಮಗಳೂ ಇಲ್ಲ. ವೇಷಭೂಷಣಗಳ ಬೇಡಿಕೆ ಕೂಡ ಇಲ್ಲ. ದುರಸ್ತಿಗೆ ಬಂದವುಗಳ ರಿಪೇರಿಗೂ ವಿದ್ಯುತ್ ಸಮಸ್ಯೆ ಆಗುತ್ತಿತ್ತು. ಆಗ ಬದುಕಿನ ಭರವಸೆ ಕೊಟ್ಟಿದ್ದು ಬೆಂಗಳೂರಿನ ಡಾ. ಹರೀಶ್ ಹಂದೆಯವರ ಸೆಲ್ಕೋ ಫೌಂಡೇಶನ್ ಹಾಗೂ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್. ಸೌರಶಕ್ತಿ ನನ್ನ ಬದುಕಿನ ಪಥವನ್ನೇ ಬದಲಿಸಿತು.
-ಸಂಜಯಕುಮಾರ ಬಿಳಿಯೂರು, ಕಲಾವಿದ

ನಾಳೆ ಸೌರ ಶಕ್ತಿ ಚಾಲಿತ ವ್ಯವಸ್ಥೆಯ ಲೋಕಾರ್ಪಣೆ
ತಾಲೂಕಿನ ಬೆಳೆಯೂರಿನಲ್ಲಿನ ಯಕ್ಷಗಾನ ವೇಷಭೂಷಣ ತಯಾರಿಕಾ ಕೇಂದ್ರದಲ್ಲಿ ಸೌರ ಶಕ್ತಿ ಚಾಲಿತ ವ್ಯವಸ್ಥೆಯ ಲೋಕಾರ್ಪಣಾ ಕಾರ‍್ಯಕ್ರಮವನ್ನು ಡಿ. 12 ರಂದು ಬೆಳಗ್ಗೆ 11 ಘಂಟೆಗೆ ಹಮ್ಮಿಕೊಂಡಿದ್ದು, ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಉದ್ಘಾಟಿಸಲಿದ್ದಾರೆ.

ಯಕ್ಷಗಾನ ಕಲಾವಿದ, ರಂಗಕರ್ಮಿ, ವೇಷಭೂಷಣ ತಯಾರಕ ಬೆಳೆಯೂರು ಸಂಜಯ ಅವರ ನೇತೃತ್ವದ ಘಟಕಕ್ಕೆ ಉಡುಪಿಯ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಸೌರಶಕ್ತಿ ವ್ಯವಸ್ಥೆ ಅಳವಡಿಸಲಾಗಿದೆ. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವಿದುಷಿ ವಸುಧಾ ಶರ್ಮಾ, ಮಾಸ್ಟರ್ ಟ್ರೈನಿ ಸುಧೀರ್ ಕುಲಕರ್ಣಿ ಅವರನ್ನು ಈ ವೇಳೆ ಅಭಿನಂದಿಸಲಾಗುವುದು ಎಂದು ಬೆಳೆಯೂರಿನ ವೇಷಭೂಷಣ ತಯಾರಿಕಾ ಕೇಂದ್ರದ ಕಲಾವಿದ ಸಂಜಯ ಬೆಳೆಯೂರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next