ನವದೆಹಲಿ: ಭಾರತೀಯ ಜನತಾ ಪಕ್ಷದ ಕಪಿಲ್ ಮಿಶ್ರಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪೋಸ್ಟರ್ ಅಭಿಯಾನ ಒಂದನ್ನು ಪ್ರಾರಂಭಿಸಿದ್ದಾರೆ. ‘ಕೇಜ್ರಿವಾಲ್ ಕಿ ಮನ್ ಕಿ ಬಾತ್’ (ಕೇಜ್ರಿವಾಲ್ ಮನದಾಳ) ಎಂಬ ಶೀರ್ಷಿಕೆಯಲ್ಲಿ ನಗರದ ಹಲವು ಕಡೆಗಳಲ್ಲಿ ಈ ಪೋಸ್ಟರ್ ಅನ್ನು ಹಾಕಲಾಗಿದೆ.
‘ಜೋ ದೇಶ್ ವಿರೋಧಿ ನಾರೇ ಲಗಾಯೇಗಾ, ಉಸೇ ಕೇಜ್ರಿವಾಲ್ ಬಚಾಯೇಗಾ’ (ದೇಶ ವಿರೋಧಿ ಘೋಷಣೆಗಳನ್ನು ಕೂಗುವವರನ್ನು ಕೇಜ್ರಿವಾಲ್ ರಕ್ಷಿಸುತ್ತಾರೆ) ಎಂದು ಶರ್ಮಾ ಅವರು ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದ್ದಾರೆ.
ಐ.ಟಿ.ಒ., ಮಂಡಿ ಹೌಸ್, ಅಶೋಕಾ ರಸ್ತೆ ಸೇರಿದಂತೆ ದೆಹಲಿ ನಗರದ ಹಲವು ಕಡೆಗಲ್ಲಿ ಇಂದು ಮುಂಜಾನೆಯಿಂದಲೇ ಕೆಜ್ರಿವಾಲ್ ವಿರುದ್ಧದ ಈ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಜವಾಹರ್ ಲಾಲ್ ವಿಶ್ವವಿದ್ಯಾನಿಲಯದ ಹಿಂದಿನ ವಿದ್ಯಾರ್ಥಿ ಸಂಘಟನೆಯ ಮುಖಂಡ ಕನ್ಹಯ್ಯ ಕುಮಾರ್ ಅವರು ದೇಶ ವಿರೋಧಿ ಘೋಷಣೆ ಮೊಳಗಿಸಿದ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದು ದೆಹಲಿ ಸರಕಾರದ ಗೃಹ ಸಚಿವಾಲಯ ಇತ್ತೀಚೆಗಷ್ಟೇ ತಾನು ಹೊರಡಿಸಿದ್ದ ಸೂಚನಾ ಪತ್ರದಲ್ಲಿ ತಿಳಿಸಿತ್ತು. ಮತ್ತು ದೆಹಲಿ ಸರಕಾರದ ಅಸಹಕಾರದ ಫಲವಾಗಿ ಕನ್ಹಯ್ಯಾ ಕುಮಾರ್ ವಿರುದ್ಧ ಹಾಕಲಾಗಿದ್ದ ಚಾರ್ಜ್ ಶೀಟ್ ವಿಫಲವಾಗಿತ್ತು. ಇದಕ್ಕೆ ಪ್ರತಿಯಾಗಿ ಕಪಿಲ್ ಮಿಶ್ರಾ ಅವರು ಈ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಈ ಮೊದಲು ಆಮ್ ಆದ್ಮಿ ಪಕ್ಷದಲ್ಲಿದ್ದ ಕಪಿಲ್ ಮಿಶ್ರಾ ಅವರು ಕಳೆದ ಆಗಸ್ಟ್ ತಿಂಗಳಲ್ಲಿ ಆಪ್ ತೊರೆದು ಭಾರತಿಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.