Advertisement

ಐಕ್ಯತೆ ಸಾರುವ ಭಾರತ ರತ್ನ

06:00 AM Aug 24, 2018 | |

ಭಾರತ ರತ್ನ…’
ಇದು ದೇಶದ ಅತ್ಯಂತ ಗೌರವಕ್ಕೆ ಪಾತ್ರವಾದ ಹೆಸರು. ಅಷ್ಟೇ ಅಲ್ಲ, “ಭಾರತ ರತ್ನ’ ಹೆಸರಲ್ಲಿ ಪ್ರಶಸ್ತಿ ಪಡೆದವರು ನಿಜಕ್ಕೂ ಧನ್ಯ. ಈಗ ಕನ್ನಡದಲ್ಲಿ ಈ ಹೆಸರಿನ ಚಿತ್ರ ಸೆಟ್ಟೇರಿದೆ. ಇತ್ತೀಚೆಗೆ ಮುಹೂರ್ತವೂ ನೆರವೇರಿದೆ. ಹಿರಿಯ ನಿರ್ದೇಶಕ ಭಗವಾನ್‌ ಅವರು ಚಿತ್ರಕ್ಕೆ ಕ್ಲಾಪ್‌ ಮಾಡುವ ಮೂಲಕ ಚಾಲನೆ ಕೊಟ್ಟಿದ್ದಾರೆ. ಈ ಹಿಂದೆ “ಕಾಲವನ್ನು ತಡೆಯೋರು ಯಾರೂ ಇಲ್ಲ’ ಚಿತ್ರ ಶುರುಮಾಡಿದ್ದ ಸಲ್ಮಾನ್‌ ಈ ಚಿತ್ರದ ನಿರ್ದೇಶಕರು.

Advertisement

ಕೆ.ಸಿ.ಸಿಂಗ್‌ ಕಥೆ ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಚಿತ್ರದ ಬಗ್ಗೆ ಮಾಹಿತಿ ಕೊಡಲೆಂದೇ ಮುಹೂರ್ತ ಮುಗಿಸಿಕೊಂಡು ಪತ್ರಕರ್ತರ ಮುಂದೆ ಬಂದಿತ್ತು ಚಿತ್ರತಂಡ.

“ಭಾರತದಲ್ಲಿ ಹಲವು ಭಾಷಿಗರಿದ್ದಾರೆ, ಹಲವು ಧರ್ಮಗಳಿವೆ. ಎಲ್ಲವೂ ಒಂದೇ ಎಂಬ ಮಂತ್ರದೊಂದಿಗೆ ಈ ಚಿತ್ರ ಮಾಡುತ್ತಿದ್ದೇವೆ. ಇಲ್ಲಿ ಪ್ರತಿ ಮನೆಯಲ್ಲೊಬ್ಬ “ಭಾರತ ರತ್ನ’ ಇರಬೇಕು ಎಂಬ ಸಂದೇಶ ಇಲ್ಲಿದೆ. ಮೊದಲು ನಾವು ಭಾರತೀಯರು, ಆಮೇಲೆ ಉಳಿದದ್ದು ಎಂಬ ವಿಷಯ ಅಡಕವಾಗಿದೆ. ರೆಹಮಾನ್‌ ಅವರಿಲ್ಲಿ ಪ್ರೊಫೆಸರ್‌ ಆಗಿ ನಟಿಸುತ್ತಿದ್ದಾರೆ. ಅವರು ದೇಶಕ್ಕಾಗಿ ಹಲವು ಕೆಲಸ
ಮಾಡುತ್ತಾರೆ. ಸಾಕಷ್ಟು ಕಷ್ಟ, ಸಮಸ್ಯೆ ಎದುರಾದರೂ ಅವೆಲ್ಲವನ್ನೂ ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದು ಕಥೆ.

ಇಲ್ಲೊಂದು ಸಣ್ಣ ಪ್ರೇಮಕಥೆಯು ಇದೆ. ಅದನ್ನು ತೆರೆ ಮೇಲೆ ನೋಡಬೇಕು. ಸೆಪ್ಟೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ. ದೇಶದ ಹಲವು ಭಾಗಗಳಲ್ಲಿ ಸುತ್ತಾಟ ನಡೆಸಿ ಚಿತ್ರೀಕರಿಸುವುದಾಗಿ ಹೇಳಿಕೊಂಡರು ಸಲ್ಮಾನ್‌. ರೆಹಮಾನ್‌ಗೆ ಇಂಥದ್ದೊಂದು ಪಾತ್ರ ಸಿಕ್ಕಿದ್ದು ಖುಷಿ ಮತ್ತು ಚಾಲೆಂಜಿಂಗ್‌ ಅಂತೆ. “ನಾನು ಈಗಷ್ಟೇ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದೇನೆ. “ಭಾರತ ರತ್ನ’ ಚಿತ್ರದ ಪಾತ್ರ ವಿಶೇಷವಾಗಿದೆ. ಇಲ್ಲಿ ನಾನು ಹೀರೋ ಅಲ್ಲ, ಕಥೆಯೇ ಹೀರೋ. ಇಲ್ಲಿ ಐಕ್ಯತೆ, ಭಾವೈಕ್ಯತೆ, ಜಾತ್ಯಾತೀತ ಬಗ್ಗೆ ಹೇಳಲಾಗುತ್ತಿದೆ. ನಾವು ವಿದೇಶಕ್ಕೆ ಹೋದರೆ, ನಮ್ಮನ್ನು ಭಾರತೀಯಅಂತಾರೆವಿನಃ, ಅವನು ಕರ್ನಾಟಕದವನು, ಕೇರಳದವನು, ಹೈದರಾಬಾದ್‌ ನವನು ಅನ್ನುವುದಿಲ್ಲ. ಅದೇ ಕಾನ್ಸೆಪ್ಟ್ ಚಿತ್ರದಲ್ಲಿದೆ. ಬಹುತೇಕ ಕನ್ನಡ ನೆಲದಲ್ಲೇ ನಡೆಯುವ ಚಿತ್ರ, ದೇಶದ ಪ್ರಮುಖ ಸ್ಥಳದಲ್ಲೂ ನಡೆಯಲಿದೆ’ ಅಂದರು ರೆಹಮಾನ್‌.

ಕೆ.ಸಿ.ಸಿಂಗ್‌ ಅವರು ಕಥೆ ಬರೆಯುವುದರ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಲವ್‌ ಇಂಡಿಯಾ ಎಂಬ ಟ್ರಸ್ಟ್‌ ಮಾಡಿರುವ ಕೆ.ಸಿ.ಸಿಂಗ್‌ ಅವರಿಗೆ, ಭಾವೈಕ್ಯತೆ ಸಾರುವ ಕುರಿತು ಒಂದು ಚಿತ್ರ ಮಾಡುವ ಆಸೆಯಿಂದ ಈ ಚಿತ್ರ ಮಾಡುತ್ತಿದ್ದಾರಂತೆ. ಇನ್ನು, ಚಿತ್ರಕ್ಕೆ ಧನ್ಯಾ ಪಾಟೀಲ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. “ಸ್ಟೇಟ್‌ಮೆಂಟ್‌’ ಮತ್ತು “ಲಂಬೋದರ’ ಚಿತ್ರದಲ್ಲಿ ನಟಿಸಿರುವ ಧನ್ಯಾಗೆ ಇಲ್ಲಿ ಕಾಲೇಜ್‌ ಲೆಕ್ಚರರ್‌ ಪಾತ್ರ ಸಿಕ್ಕಿದೆಯಂತೆ. ಮೊದಲ ಸಲ ಈ ರೀತಿಯ ಪಾತ್ರ ಮಾಡುತ್ತಿರುವ ಖುಷಿ ಹಂಚಿಕೊಂಡರು ಅವರು.

Advertisement

ನಟಿ ಅಶ್ವಿ‌ನಿ, ಅಂದು ಚಿತ್ರತಂಡಕ್ಕೆ ಶುಭಾಶಯ ಕೋರಲು ಆಗಮಿಸಿದ್ದರು. “ಚಿತ್ರದಲ್ಲಿ ನಾನು ನಟಿಸುತ್ತಿಲ್ಲ.ಆದರೆ, ನಿರ್ದೇಶಕ ಸಲ್ಮಾನ್‌ ಚಿಕ್ಕ ವಯಸ್ಸಿಗೆ ಒಳ್ಳೇ ಯೋಚನೆ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾನೆ. ಅವನಿಗೆ ಮತ್ತು ತಂಡಕ್ಕೆ ಒಳ್ಳೆಯದಾಗಲಿ’ ಅಂದರು. ಚಿತ್ರಕ್ಕೆ ಅರುಣ್‌ ಆ್ಯಂಡ್ರೋ ಸಂಗೀತ ನೀಡುತ್ತಿದ್ದು, ಮಂಜುನಾಥ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next