ಮಂಗಳೂರು: ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಫಾಝಿಲ್‌ಗೂ ಪರಿಹಾರ ಸಿಗಬೇಕು. ಇಂತಹ ಘಟನೆಗಳು ನಡೆದಾಗ ಸರಕಾರದಿಂದ ಸಿಗಬೇಕಾದ ಪರಿಹಾರ ಅಗತ್ಯವಾಗಿ ಸಿಗಲಿದೆ. ಫಾಝಿಲ್ ಪ್ರಕರಣದಲ್ಲಿಯೂ ಪರಿಹಾರಕ್ಕಾಗಿ ಜಿಲ್ಲಾಡಳಿತದಿಂದ ಕಳುಹಿಸಲಾದ ಪಟ್ಟಿಯಲ್ಲಿ ಅವರ ಹೆಸರಿದ್ದಿದ್ದನ್ನು ನಾನು ನೋಡಿದ್ದೇನೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಡಾ| ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ಪ್ರಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಸುದ್ದಿಗಾರರ ಜತೆಗಿನ ಸಂವಾದದ ವೇಳೆ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿ, ಫಾಜಿಲ್ ಹತ್ಯೆ ದುರ್ಘಟನೆಯ ಬಳಿಕ ಅವರ ಮನೆಗೆ ಹೋಗಲು ನಿರ್ಧರಿಸಿದ್ದೆ. ಆದರೆ, ನನ್ನ ಭೇಟಿ ವೇಳೆ ಗಲಾಟೆ ನಡೆಸಲು ಸಂಚು ನಡೆದಿದ್ದ ಬಗ್ಗೆ ಮಾಹಿತಿ ಇತ್ತು. ಹಿಂದೆ ದೀಪಕ್ ರಾವ್ ಎಂಬವರ ಹತ್ಯೆ ಸಂದರ್ಭ ಅಂದಿನ ಶಾಸಕರು ಭೇಟಿ ನೀಡಿದ್ದಾಗ ಘೆರಾವ್ ಹಾಕುವ ಪ್ರಕ್ರಿಯೆ ನಡೆದಿತ್ತು. ನನ್ನ ಭೇಟಿ ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗದಿರಲಿ ಎಂಬ ಕಾರಣಕ್ಕೆ ಹೋಗಿಲ್ಲ ಎಂದರು.
ಸಾಮರಸ್ಯ ಅಗತ್ಯ ಎನ್ನುವ ನೀವು, ಇತ್ತೀಚೆಗೆ ಕಾವೂರು ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಹಾಕುವ ಮೂಲಕ ಸಾಮರಸ್ಯ ಕದಡುವ ಪ್ರಕ್ರಿಯೆ ಬಗ್ಗೆ ಯಾಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಕೇಳಿದಾಗ, ಇದು ಚರ್ಚೆಯಾಗಬೇಕಾದ ವಿಚಾರ. ಬ್ಯಾನರ್ ಹಾಕಿ ಅಥವಾ ಹಾಕಬೇಡಿ ಎಂದು ನಾನು ಹೇಳಲಾಗದು. ಇದನ್ನು ಸಮುದಾಯದ ಮುಖಂಡರು ಬಗೆಹರಿಸಬೇಕು. ಅಭಿವೃದ್ಧಿಗೆ ಸಾಮರಸ್ಯ ಅಗತ್ಯ. ಜನರ ಮನಸ್ಥಿತಿ ಬದಲಾಗುತ್ತಿದೆ. ನಾನೂ ಕಾಲೇಜೊಂದರ ಪ್ರಾಂಶುಪಾಲನಾಗಿದ್ದವ. ಹಿಂದೆಲ್ಲ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಿ ತರಗತಿಗೆ ಬರುತ್ತಿರಲಿಲ್ಲ. ಹಿಜಾಬ್ ಹಾಕುವುದು ಸರಿಯೋ ತಪ್ಪೋ ಬೇರೆ ವಿಷಯ. ಆದರೆ ಈಗ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ನಾಮ, ಶಾಲು ಹಾಕಿ ಬರುವವರು ಜಾಸ್ತಿಯಾಗುತ್ತಿದೆ. ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ ಎಂದು ಡಾ| ಭರತ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: ಕೇರಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಡೂರ್ ಗೋಪಾಲಕೃಷ್ಣನ್ ರಾಜೀನಾಮೆ