Advertisement

Bharath Rice, ಹಿಟ್ಟು ಬಂದ್‌ ಆಗಿಲ್ಲ, 2 ದಿನದಲ್ಲಿ ಪುನರಾರಂಭ:  ಕೇಂದ್ರ ಸಚಿವ ಜೋಶಿ 

11:10 PM Jul 07, 2024 | Team Udayavani |

ಹುಬ್ಬಳ್ಳಿ: ಭಾರತ್‌ ಅಕ್ಕಿ ಬಂದ್‌ ಆಗಿಲ್ಲ. ಮೊದಲನೇ ಆದೇಶ ಜೂ. 30ರ ವರೆಗೆ ಇತ್ತು. ಆ ಪ್ರಕಾರ ನಾವು ಇದ್ದ ಸಂಗ್ರಹ ವಿತರಿಸಿದ್ದೇವೆ. ಜುಲೈನಲ್ಲಿ ಇನ್ನೆರಡು ದಿನಗಳಲ್ಲಿ ಪುನಾರಂಭಿಸಲಾಗುವುದು ಎಂದು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ವಿತರಿಸುವ ಭಾರತ್‌ ಅಕ್ಕಿ, ಹಿಟ್ಟು ಬಂದ್‌ ಮಾಡಿದ್ದಾರೆಂದು ಸಿದ್ದರಾಮಯ್ಯ ಟೀಕೆ ನಿರಾಧಾರ. ಹಾಲು ಒಕ್ಕೂಟಗಳಲ್ಲಿ ರೈತರಿಗೆ ನೀಡುತ್ತಿರುವ ಸಬ್ಸಿಡಿ ಸ್ಥಗಿತಗೊಳಿಸಿ ಜನರಿಗೆ ದ್ರೋಹ ಮಾಡುತ್ತಿರುವ ಕಾಂಗ್ರೆಸ್‌ ಸರಕಾರ ಎಲ್ಲ ದರ ಹೆಚ್ಚಳ ಮಾಡಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ಆಗುತ್ತಿಲ್ಲ. ಅಕ್ಕಿ ಖರೀದಿಸುವುದಕ್ಕೂ ಹಣ ಇಲ್ಲದ ದರಿದ್ರ ಸರಕಾರ. ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆ, ವೃದ್ಧಾಪ್ಯ ವೇತನ ಹಣ ಜಮೆ ಆಗಿಲ್ಲ. ಪೆಟ್ರೋಲ್‌, ಡೀಸೆಲ್‌, ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದರು.

ಸೋಲಿಗೆ ಕಾರಣ ಬೇರೆ
ರಾಹುಲ್‌ ಗಾಂಧಿ ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಅಯೋಧ್ಯೆಯಲ್ಲಿ ಬೇರೆ ಕಾರಣಗಳಿಂದ ನಾವು ಸೋತಿದ್ದೇವೆ. ಉತ್ತರ ಪ್ರದೇಶದಲ್ಲಿ ಅಖೀಲೇಶ್‌ ಯಾದವ್‌ ಅಂಗಿ ಹಿಡಿದುಕೊಂಡು ಹೋಗಿ 8 ಸ್ಥಾನ ಗೆದ್ದ ಮೇಲೆ ಅಯೋಧ್ಯೆಯಲ್ಲಿ ನಾವು ಗೆದ್ದೆವು ಎಂದು ಹೇಳುವುದು ಸರಿಯಲ್ಲ. ಕರ್ನಾಟಕದಲ್ಲಿ ಅವರದ್ದೇ ಸರಕಾರವಿದ್ದರೂ 123 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ. ಉತ್ತರ ಪ್ರದೇಶ, ಗುಜರಾತ್‌ನಲ್ಲಿ ನಮ್ಮದೇ ಆಡಳಿತ ಬರಲಿದೆ ಎಂಬ ಕಾಂಗ್ರೆಸ್‌ ಹೇಳಿಕೆ ಹಗಲುಗನಸಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next