ಚಿತ್ರದುರ್ಗ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ 12ನೇ ದಿನದ ಪಾದಯಾತ್ರೆ ಒಂದು ಗಂಟೆ ತಡವಾಗಿ ಆರಂಭವಾಯಿತು.
ಬೆಳಗ್ಗೆ 6.30ಕ್ಕೆ ಆರಂಭವಾಗುತ್ತಿದ್ದ ಯಾತ್ರೆ ಮಂಗಳವಾರ ಬೆಳಗ್ಗೆ 7.30ಕ್ಕೆ ಪ್ರಾರಂಭವಾಯಿತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಭಾರತ್ ಐಕ್ಯತಾ ಯಾತ್ರೆ ಆರಂಭ ಆಗುತ್ತಿತ್ತು. ಮಳೆ ಕಾರಣಕ್ಕೆ ತಡವಾಗಿದೆ. ಈ ಕುರಿತು ರಾತ್ರಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆವರೆಗೆ ಸಾಗಲಿದೆ. ಬೆಳಿಗ್ಗೆ 11 ಗಂಟೆಯವರೆಗೆ ಹೆಜ್ಜೆ ಹಾಕುವ ಯಾತ್ರಾರ್ಥಿಗಳು ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ 4ಕ್ಕೆ ಪುನರಾರಂಭವಾಗುವ ಯಾತ್ರೆ ರಾತ್ರಿ ಚಳ್ಳಕೆರೆ ತಲುಪಲಿದೆ.
ಹಿರಿಯೂರು ನಗರದಿಂದ ಬಾಲೇನಹಳ್ಳಿವರೆಗೆ ಸೋಮವಾರ ನಡೆದಿದ್ದ ಪಾದಯಾತ್ರೆ ರಾತ್ರಿ ಹರ್ತಿಕೋಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಿತ್ತು. ಪಾದಯಾತ್ರೆ ಮುಗಿದ ಬಳಿಕ ಆರಂಭವಾದ ಮಳೆ ರಾತ್ರಿ ಇಡೀ ಸುರಿದಿತ್ತು. ನಸುಕಿನ 6 ಗಂಟೆಗೆ ಮಳೆ ಬಿಡುವು ನೀಡಿದ್ದು, ಪಾದಯಾತ್ರೆ ಆರಂಭವಾಯಿತು.
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ‘150-ಎ’ನಲ್ಲಿ ಚಳ್ಳಕೆರೆ ಮತ್ತು ಹಿರಿಯೂರು ನಡುವೆ ಸಾಗುತ್ತಿದೆ.
ಇದನ್ನೂ ಓದಿ : ದೇಶದ ಬಾಹ್ಯಾಕಾಶ ಆರ್ಥಿಕತೆ 2025ಕ್ಕೆ ಲಕ್ಷ ಕೋಟಿ ರೂ. ಮೌಲ್ಯಕ್ಕೆ