Advertisement

ಭಾರತ್ ಜೋಡೋ: ತೊಂಡವಾಡಿ ಗೇಟ್ ನಿಂದ 2ನೇ‌ ದಿನದ ಪಾದಯಾತ್ರೆ ಆರಂಭ

11:16 PM Oct 01, 2022 | Team Udayavani |

ಗುಂಡ್ಲುಪೇಟೆ: ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆಯ 2ನೇ ದಿನದ ಪಾದಯಾತ್ರೆ ಶನಿವಾರ ಬೆಳಗ್ಗೆ 7.30ಕ್ಕೆ ಬೇಗೂರು ಬಳಿಯ ತೊಂಡವಾಡಿ ಗೇಟ್‌ನಿಂದ ಪ್ರಾರಂಭ ವಾಗಿ, ಸಂಜೆ ವೇಳೆಗೆ ಮೈಸೂರಿನ ತಾಂಡವಪುರ ಗ್ರಾಮದಲ್ಲಿ ಮುಕ್ತಾಯ ವಾಯಿತು.

Advertisement

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕ್ಷೇತ್ರದ ಮುಖಂಡ ಎಚ್‌.ಎಂ. ಗಣೇಶ ಪ್ರಸಾದ್‌ ಸಹಿತ ಪ್ರಮುಖ ನಾಯಕರು ಹೆಜ್ಜೆ ಹಾಕಿದರು.

ರಾಹುಲ್‌ ಗಾಂಧಿ ಜತೆ ಆಗಮಿಸಿದ 120 ಯಾತ್ರಾರ್ಥಿಗಳು, ಸೇವಾ ದಳದವರು ಹಾಗೂ ಬೇಗೂರು ಭಾಗದ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿ ಸುಮಾರು 15 ಕಿ.ಮೀ. ಸಂಚರಿಸಿದರು. ಬೆಳಗ್ಗೆ 9.30ರ ಸುಮಾರಿಗೆ ನಂಜನಗೂಡು ತಾಲೂಕಿನ ಎಲೆಚಗೆರೆ ಬೋರೆ ಬಳಿ ನಂಜನಗೂಡು, ಎಚ್‌.ಡಿ.ಕೋಟೆ ಮತ್ತು ಮೈಸೂರು ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿಕೊಂಡ ಕಾರಣ ಜನಜಾತ್ರೆಯೇ ಕಂಡು ಬಂದಿತು.

ರಾಹುಲ್‌ ಜತೆ ಹೆಜ್ಜೆ
ಹಾಕಿದ ಅಪ್ಪ-ಮಗಳು
ತ್ರಿವರ್ಣ ಧ್ವಜದ ಬಣ್ಣದ ಬಟ್ಟೆ ಧರಿಸಿದ್ದ ತಾಲೂಕಿನ ಕೋಟೆಕೆರೆ ಗ್ರಾಮದ ಕಾಂಗ್ರೆಸ್‌ ಮುಖಂಡ ಸಿದ್ದರಾಜು ಮಗಳನ್ನು ಕಂಡ ರಾಹುಲ್‌ ಗಾಂಧಿ ಕರೆದು ಅಪ್ಪ, ಮಗಳ ಕೈ ಹಿಡಿದು ಒಂದೆರಡು ಹೆಜ್ಜೆ ಹಾಕಿದ್ದು ಕಾರ್ಯಕರ್ತರಲ್ಲಿ ಸಂತಸ ತಂದಿತು.

8.30ಕ್ಕೆ ನಂಜನಗೂಡಿಗೆ
ಯಾತ್ರೆಯು 8.30ರ ಸುಮಾರಿಗೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕು ಗಡಿ ದಾಟಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡೆ ತೆರಳಿತು. ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ಮೈಸೂರು ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ ಹಾಗು ಜಿಲ್ಲೆಯ ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಗುಂಡ್ಲುಪೇಟೆ ಗಡಿ ಬಳಿ ಸೇರುವ ಮೂಲಕ ರಾಹುಲ್‌ ಗಾಂಧಿ ಹಾಗೂ ರಾಜ್ಯ ನಾಯಕರನ್ನು ಸ್ವಾಗತಿಸಿದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವ ನಾರಾಯಣ, ಮಾಜಿ ಸಚಿವ ಈಶ್ವರ್‌ ಖಂಡ್ರೆ, ಶಾಸಕರಾದ ಡಾ| ಯತೀಂದ್ರ ಸಿದ್ದರಾಮಯ್ಯ, ಎಚ್‌.ಪಿ. ಮಂಜುನಾಥ್‌, ಅನಿಲ್‌ ಚಿಕ್ಕಮಾದು, ಕೆ.ಜೆ.ಜಾರ್ಜ್‌, ಎಚ್‌. ಸಿ. ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ, ಕೃಷ್ಣಬೈರೇಗೌಡ, ಸಲೀಂ ಅಹಮದ್‌, ಯು.ಟಿ.ಖಾದರ್‌, ಚಾಮುಲ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌. ನಂಜುಂಡಪ್ರಸಾದ್‌ ಮುಂತಾದ ಪ್ರಮುಖರು ಜತೆಗಿದ್ದರು.

ರವಿವಾರ ಎಲ್ಲಿ?
ರವಿವಾರ ಬೆಳಗ್ಗೆ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಪಾದಯಾತ್ರೆ ನಡೆಸಿ ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ತಲುಪಿ ಸಂಜೆ ಕಡಕೋಳ ಇಂಡಸ್ಟ್ರಿಯಲ್‌ ಜಂಕ್ಷನ್‌ನಿಂದ ಮತ್ತೆ ಪಾದಯಾತ್ರೆ ಆರಂಭಗೊಂಡು ಸಂಜೆ ಮೈಸೂರು ಅರಮನೆ ಎದುರು ಮುಕ್ತಾಯಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next