Advertisement
ಸ್ವಾಮೀ ವಿವೇಕಾನಂದರು ಭಾರತವನ್ನು ಸುತ್ತಾಡಿದ ಬಳಿಕವೇ ಇಲ್ಲಿನ ಮಣ್ಣಿನ ಗುಣ ಅರಿತರು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ. ಭಾರತದ ಬಗ್ಗೆ ಅನೇಕ ಜನ ಬರೆದಿಟ್ಟಿದ್ದಾರೆ, ಹಾಡು ರಚಿಸಿ ಹಾಡಿದ್ದಾರೆ, ವರ್ಣಿಸುತ್ತಾ ಕುಣಿದು ಕುಪ್ಪಳ್ಳಿಸಿದ್ದಾರೆ. ಅಷ್ಟೇ ಯಾಕೆ- ಬದಲಾದ ಕಾಲಘಟ್ಟದಲ್ಲಿ ಸಿನೆಮಾಗಳು, ಡಾಕ್ಯುಮೆಂಟರಿಗಳಿಗೂ ಬರವಿಲ್ಲ. ಆದರೆ ಸ್ವತಃ ನೋಡಿ ಅನುಭವಿಸುವುದರ ಮುಂದೆ ಇನ್ನೊಬ್ಬರ ಅನುಭವ ಸ್ವಲ್ಪ ಕಡಿಮೆಯೇ.
Related Articles
Advertisement
ಓದು, ಮದುವೆ ಎನ್ನುವ ಪ್ರಕ್ರಿಯೆ ಬಿಟ್ಟು ಉಳಿದವರಿಗಿಂತ ನನ್ನದು ಭಿನ್ನ ಅನಿಸಿದರೂ ಸರಿ, ಒಂದು ಸಲ ಭಾರತ ದರ್ಶನ, ಆಮೇಲೆ ಉಳಿದ ವಿಚಾರಗಳು. ಯಾವುದೇ ರೀತಿಯ ಪ್ರಯಾಣವಾದರೂ ಸರಿ, ಇಲ್ಲದಿದ್ದರೂ ಪಾದಯಾತ್ರೆಗೆ ಯಾವ ಖರ್ಚು ಎಂಬ ವಿಚಾರ ಇತ್ತೀಚೆಗೆ ಸದ್ದಿಲ್ಲದೆ ತಲೆಯೊಳಗೆ ಸುಳಿದಾಡಿ ಮಾಯವಾಗುತಿದೆ.
ಇಷ್ಟೆಲ್ಲ ಬರೆದರೂ ಎದ್ದು ಹೋಗಿಬಿಡಬೇಕು ಎಂಬ ಗಟ್ಟಿ ಮನಸ್ಸು ಮೂಡುತ್ತಿಲ್ಲ ಕಾರಣ ಗೊತ್ತಿಲ್ಲ, ಉದಯವಾಣಿಯ ಯುವಿ ಫ್ಯೂಷನ್ ನೂರನೇ ಸಂಚಿಕೆಯಲ್ಲಿ ಇದನ್ನು ಬರೆಯುತ್ತಿರುವ ಕಾರಣ, ಮನಸ್ಸು ಮುಂದೆ ಹೋಗಲು ನಿರಾಕರಿಸಿದರೆ, ನೋಡಲ್ಲಿ ನಿನ್ನ ಪಯಣದ ಕನಸನ್ನು ಜನರಿಗೆ ತಿಳಿಸಿದ್ದೀಯಾ, ಈಗ ಹೋಗಲೇಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ಬಳಸಿಕೊಳ್ಳಬಹುದೆಂದು ಮಾತ್ರ.
“ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು’ ಎಂಬ ಹಾಡು ಸದ್ಯಕ್ಕೆ ಮನಸ್ಸಿಗೆ ಸಮಾಧಾನ ನೀಡುತ್ತದೆ. ಭಾರತ ದರ್ಶನ ಕೇವಲ ನನ್ನೊಬ್ಬನ ಕನಸಲ್ಲ ಅನೇಕ ಜನರ ಕನಸು. ನಾನಿಲ್ಲಿ ಕೇವಲ ಪ್ರತಿನಿಧಿ ಅಷ್ಟೇ. ಅದೆಷ್ಟೋ ಜನರು ಕೇದಾರನಾಥ ನೋಡುವ ಬಯಕೆ ಇಟ್ಟುಕೊಂಡವರು. ಇನ್ನೇನೋ ಪ್ರವಾಸದ ಬಯಕೆ ಉಳ್ಳವರು ನಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಜಗತ್ತನ್ನೇ ತೋರಿಸುತ್ತೇನೆ ಎಂದು ಹೇಳಿದವರು ಇದ್ದಾರೆ. ನನ್ನಂಥವರು ತೋರಿಸುತ್ತೇನೆ ಎಂದು ಹೇಳುವರಲ್ಲ. ಜಗತ್ತು ಆಮೇಲೆ ಮೊದಲು ಭಾರತವನ್ನು ನಾನು ನೋಡುತ್ತೇನೆ ಎಂಬ ವರ್ಗಕ್ಕೆ ಸೇರಿದವರು.
ಭಾರತ ದರ್ಶನದಿಂದ ಏನು ಲಾಭ? ಲಾಭದ ಉದ್ದೇಶದಿಂದ ಮಾಡುವ ಯಾವುದೇ ಕಾರ್ಯ ಮನಸ್ಸಿಗೆ ಮುದ ನೀಡುವುದಿಲ್ಲ ಎಂಬುದನ್ನು ಅರಿತುಕೊಂಡಿದ್ದೇನೆ. ಏನು ಲಾಭ ಅಂತ ಕೇಳಿದವರ ಪ್ರಶ್ನೆಗೆ ಏನಿಲ್ಲ, ನಿನ್ನಿಂದ ದೂರ ಅದು ಶಾಶ್ವತವಾಗಿ ಆದರೂ ಆಗಬಹುದು ಎಂಬ ಉತ್ತರ ನೀಡುವಷ್ಟು ಲಾಭದಾಯಕ ಇದು ಅಂದುಕೊಳ್ಳಬಹುದು.
ಭಾರತ ದರ್ಶನ ಎಂಬ ಬಯಕೆ ಅದು ಕೇವಲ ಪ್ರವಾಸವಷ್ಟೇ ಅಲ್ಲ, ಬದಲಾವಣೆ, ಸಂಸ್ಕೃತಿಗಳ, ನಿನ್ನೊಳಗೊಂದು ಅನುಸಂಧಾನ ಅಂದರೂ ತಪ್ಪಾಗಲಾರದು. ಕನಸು ನನಸಾಗಲಿ ಎಂಬ ಆಶಯ ಸದ್ಯಕ್ಕೆ ಅಲ್ಪವಿರಾಮ. ಧನ್ಯವಾದಗಳು.
-ಗಿರಿಧರ ಹಿರೇಮಠ,
ಹುಬ್ಬಳ್ಳಿ