ಬೆಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಇಂದು ನಡೆಯುತ್ತಿದೆ. ರಾಜ್ಯದಲ್ಲೂ ರೈತ ಸಂಘ ಮತ್ತು ಹಸಿರು ಸೇನೆ ಬಂದ್ ಗೆ ಕರೆ ನೀಡಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರತ್ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು ರಾಜ್ಯಗಳಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆಯಿದೆ. ಹಲವೆಡೆ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ರಾಜ್ಯದಲ್ಲಿ ರೈತ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನಲ್ಲಿ ಜನಜೀವನ ಸಾಮಾನ್ಯವಾಗಿದೆ. ಸರ್ಕಾರಿ, ಖಾಸಗಿ ಬಸ್ ಸಂಚಾರ ಎಂದಿನಂತಿದೆ. ಕೆ.ಆರ್. ಮಾರುಕಟ್ಟೆಯಲ್ಲೂ ವ್ಯಾಪಾರ ವಹಿವಾಟು ಸಹಜವಾಗಿದೆ.
ಕರಾವಳಿ ಎಂದಿನಂತೆ
ಕರಾವಳಿ ಜಿಲ್ಲೆಗಳಲ್ಲಿ ಬಂದ್ ಬಿಸಿ ಕಂಡುಬಂದಿಲ್ಲ. ಬಸ್ ಗಳ ಓಡಾಟ ಸಹಜವಾಗಿದ್ದು, ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ತೆರೆದಿದೆ.