ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ನೆಲಮಂಗಲ ಬಳಿ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಶ್ರೀಮುರಳಿ ಎದುರಾಳಿಗಳ ಜೊತೆ ಹೊಡೆದಾಡುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. “ಶ್ರೀ ಕಾತ್ಯಾಯಿನಿ ದುರ್ಗಾಮಾತೆ’ಯ ಬೃಹತ್ ವಿಗ್ರಹ ಮುಂದೆ ರೌಡಿಗಳನ್ನು ಹಿಗ್ಗಾಮುಗ್ಗಾ ಹೊಡೆದುರುಳಿಸುವ ದೃಶ್ಯಗಳನ್ನು ಸಾಹಸ ನಿರ್ದೇಶಕ ರವಿವರ್ಮ ಅವರ ನಿರ್ದೇಶನದಲ್ಲಿ ಚಿತ್ರಿಸಿಕೊಳ್ಳಲಾಗುತ್ತಿದೆ.
ವಿಶೇಷವೆಂದರೆ, ಈ ಫೈಟ್ ದೃಶ್ಯ ಕ್ಲೈಮ್ಯಾಕ್ಸ್‌ನಲ್ಲಿ ಬರಲಿದ್ದು, ಇದಕ್ಕಾಗಿಯೇ ಎಂಟು ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತಿದೆ. ಇಷ್ಟು ದಿನಗಳ ಕಾಲ ಚಿತ್ರೀಕರಣಗೊಳ್ಳುವ ಈ ಫೈಟ್ ದೃಶ್ಯಕ್ಕೆ 1.60 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂಬುದು ಚಿತ್ರತಂಡದ ಹೇಳಿಕೆ.
ಈ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ದೃಶ್ಯದಲ್ಲಿ ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಸಹೋದರರು ಸೇರಿದಂತೆ ಸುಮಾರು 19 ಮಂದಿ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, 84 ಜನ ಫೈಟರ್ಸ್, 120 ಜನ ಬಾಡಿ ಬಿಲ್ಡರ್ಸ್ ಸೇರಿದಂತೆ 400 ಮಂದಿ ಜೂನಿಯರ್ ಆರ್ಟಿಸ್ಟ್‌ಗಳು ಭಾಗಿಯಾಗಿದ್ದಾರೆ. ಚೇತನ್‌ಕುಮಾರ್ ನಿರ್ದೇಶನದ ಈ ಚಿತ್ರವನ್ನು ಸುಪ್ರೀತ್ ನಿರ್ಮಿಸುತ್ತಿದ್ದಾರೆ.