ಈವರೆಗೂ ಬಹದ್ದೂರ್ ಮತ್ತು ಭರ್ಜರಿಯಂಥಾ ಸೂಪರ್ ಹಿಟ್ ಚಿತ್ರಗಳ ಮೂಲಕವೇ ಹೆಸರಾಗಿರುವವರು ನಿರ್ದೇಶಕ ಚೇತನ್ ಕುಮಾರ್. ಅವರು ಸೃಷ್ಟಿಸಿರೋ ಮೂರನೇ ಚಿತ್ರವಾದ ಭರಾಟೆ ಭರ್ಜರಿ ಸೌಂಡು ಮಾಡುತ್ತಲೇ ಈ ವಾರ ಅಂದರೆ, ಹದಿನೆಂಟನೇ ತಾರೀಕಿನಂದು ತೆರೆಗಾಣುವ ತವಕದಲ್ಲಿದೆ. ಈ ಹಿಂದಿನ ಎರಡು ಚಿತ್ರಗಳ ಮೂಲಕವೇ ಚೇತನ್ ಕುಮಾರ್ ಅವರ ಕಥೆ ಸೃಷ್ಟಿಸುವ ಮತ್ತು ದೃಷ್ಯ ಕಟ್ಟುವ ಕಸುವೇನೆಂಬುದರ ಅರಿವಾಗಿತ್ತು. ಭರಾಟೆ ಮೂಲಕವಂತೂ ಅದರ ವಿರಾಟ್ ರೂಪದ ದರ್ಶನವಾಗಲಿದೆ!
ಮೊನ್ನೆ ಬಿಡುಗಡೆಯಾಗಿರೋ ಟ್ರೇಲರ್‌ನಲ್ಲಿ ಇದೊಂದು ವಿಭಿನ್ನ ಕಥೆಯನ್ನೊಳಗೊಂಡಿರೋ ಚಿತ್ರವೆಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಭಾರತದ ಪುರಾತನ ಔಷಧ ಪದ್ಧತಿಯಾದ ಆಯುರ್ವೇದದ ಉಲ್ಲೇಖದ ಮೂಲಕವೇ ಈ ಕಥೆಯತ್ತ ಎಲ್ಲರ ಚಿತ್ರವೂ ನೆಟ್ಟುಕೊಂಡಿದೆ.
ನಿರ್ದೇಶಕಕರು ಇಲ್ಲಿ ಹಲವು ಕೊಂಬೆ ಕೋವೆಗಳಿರೋ ರೋಚಕ ಕಥೆಯನ್ನು ಹೇಳಿದ್ದಾರೆ. ವಿಶೇಷವೆಂದರೆ ಪಕ್ಕಾ ಮಾಸ್ ಶೈಲಿಯ ಈ ಚಿತ್ರದಲ್ಲಿ ಮುದ್ದಾದ ಪ್ರೇಮ ಕಥೆಯೂ ಇದೆ.
ಈಗಾಗಲೇ ಈ ಚಿತ್ರದ ಹಾಡುಗಳು ಸೂಪರ್ ಹಿಟ್ಆಗಿವೆ. ಅವುಗಳ ಮೂಲಕವೇ ಶ್ರೀ ಮುರುಳಿ ಮತ್ತು ಶ್ರೀ ಲೀಲಾ ಪ್ರೇಕ್ಷಕರ ಪಾಲಿನ ಫೇವರಿಟ್ ಜೋಡಿಯಾಗಿಯೂ ನೆಲೆ ಕಂಡುಕೊಂಡಿದ್ದಾರೆ. ಇಲ್ಲಿ ಶ್ರೀ ಮುರುಳಿ ಮಾತ್ರವಲ್ಲದೇ ಶ್ರೀ ಲೀಲಾ ಕೂಡಾ ಒಂದಷ್ಟು ಶೇಡುಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ.
ಅದರಲ್ಲಿ ಈ ಪ್ರೇಮ ಕಥಾನಕದ ಶೇಡೂ ಕೂಡಾ ಪ್ರಧಾನವಾಗಿಯೇ ಸೇರಿಕೊಂಡಿದೆ. ಪ್ರೇಮಕಥೆ ಈ ಸಿನಿಮಾದ ಮೂಲ ಕಥೆಯೊಂದಿಗೇ ಹೊಸೆದುಕೊಂಡಿದೆ. ಅದು ನೋಡುಗರನ್ನು ಆರಂಭದಿಂದ ಕಡೆವರೆಗೂ ಕೈ ಹಿಡಿದು ಕರೆದೊಯ್ಯಲಿದೆ.