ಕೊಲ್ಕತಾ: ಪಂಟೊಮಾಥ್ಸ್‌ನ ಭಾರತ್ ವ್ಯಾಲ್ಯು ಫಂಡ್ (ಬಿವಿಎಫ್), ಕೋಲ್ಕತ್ತಾ ಮೂಲದ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್ ನಲ್ಲಿ ₹ 235 ಕೋಟಿ ಹೂಡಿಕೆ ಮಾಡಿದೆ.
ಈ ಮೂಲಕ ಖಾಸಗಿ ಹೂಡಿಕೆದಾರರಿಗೆ ಷೇರು ಮಾರಾಟದ ಸುತ್ತನ್ನು ಪೂರ್ಣಗೊಳಿಸಿರುವುದಾಗಿ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್ ಪ್ರಕಟಿಸಿದೆ. ಈ ಹೂಡಿಕೆಯು ಕಂಪನಿಯ ಆಡಳಿತ ಮಂಡಳಿಯ ನಿಯಂತ್ರಣ ಹೊಂದಿಲ್ಲದ ಪಾಲುದಾರಿಕೆ (ಮೈನಾರಿಟಿ ಸ್ಟೇಕ್) ಆಗಿರಲಿದೆ. ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್, ತನ್ನ ಉತ್ಪನ್ನಗಳನ್ನು ʼಪ್ರಭುಜಿʼ ಬ್ರ್ಯಾಂಡ್ ಹೆಸರಿನಡಿ ಮಾರಾಟ ಮಾಡುತ್ತಿದೆ.
ಕುರುಕುಲು ತಿಂಡಿಗಳ ಮಾರುಕಟ್ಟೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಹಣಕಾಸು ವರ್ಷ 2024ರಲ್ಲಿ ಈ ಮಾರುಕಟ್ಟೆಯು ₹ 42,600 ಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಹಣಕಾಸು ವರ್ಷ 2032 ರ ವೇಳೆಗೆ ₹ 95,500 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಮಾರುಕಟ್ಟೆಯ ಒಟ್ಟಾರೆ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ಶೇ 11 ರಷ್ಟಿದೆ.
ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್ ಕುರುಕುಲು ತಿಂಡಿ ಮತ್ತು ಉಪ್ಪುಖಾರದ ಉತ್ಪನ್ನಗಳ ಉದ್ಯಮದಲ್ಲಿ 6 ದಶಕಗಳಿಗಿಂತಲೂ ಹೆಚ್ಚು ಕಾಲದ ಸದೃಢ ಪರಂಪರೆ ಹೊಂದಿದೆ. ಕಂಪನಿಯು ತನ್ನ ಉತ್ಪನ್ನಗಳನ್ನು “ಪ್ರಭುಜಿ” ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಇದು 100ಕ್ಕೂ ಹೆಚ್ಚು ಉತ್ಪನ್ನ ಗುರುತಿಸುವ ಸಂಕೇತ (ಎಸ್‌ಕೆಯು) ಗಳೊಂದಿಗೆ ವ್ಯಾಪಕ ಉತ್ಪನ್ನಗಳನ್ನು ನೀಡುತ್ತಿದೆ. ಇದು ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ಭಾರತದ ಮಾರುಕಟ್ಟೆಗಳಲ್ಲಿ ಬಲವಾದ ಬ್ರ್ಯಾಂಡ್ ಮನ್ನಣೆಯನ್ನೂ ಹೊಂದಿದೆ. ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ತ್ವರಿತ ಸೇವಾ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿದೆ. ಆಧುನಿಕ ಬ್ರ್ಯಾಂಡ್ ಆಗಿರುವ, ‘ಪ್ರಭುಜಿ’ ಎಂಬುದು ಕಂಪನಿಯ ಬಹು ಜನಪ್ರಿಯ ಪದವಾಗಿದೆ.
ಈ ಪದವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕಂಪನಿಯು ಅತ್ಯಾಧುನಿಕ ಮಾರುಕಟ್ಟೆ ಕಾರ್ಯತಂತ್ರ ಅನುಸರಿಸುತ್ತಿದೆ. ಬಾಲಿವುಡ್‌ನ ತಾರೆಯರಾದ ಶಾರುಖ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಬ್ರಾಂಡ್ ಪ್ರಚಾರ ರಾಯಭಾರಿಗಳಾಗಿದ್ದಾರೆ.