ವಾರಾಣಸಿ : ವಿಶ್ವ ವಿಖ್ಯಾತ ಶೆಹನಾಯ್ ಮಾಂತ್ರಿಕ, ಭಾರತ ರತ್ನ ಪುರಸ್ಕೃತ ಬಿಸ್ಮಿಲ್ಲಾ ಖಾನ್ ಅವರ ಮನೆಯಲ್ಲಿ ಈಚೆಗೆ ನಡೆದಿದ್ದ ಅತ್ಯಮೂಲ್ಯ ಶೆಹನಾಯ್ ವಾದ್ಯಗಳ ನಿಗೂಢ ಕಳವಿನ ಪ್ರಕರಣವನ್ನು ವಾರಾಣಸಿ ಪೊಲೀಸ್‌ನ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಭೇದಿಸಿದೆ. ಖಾನ್ ಅವರ ಮೊಮ್ಮಗ ಮತ್ತು ಇಬ್ಬರು ಜ್ಯುವೆಲ್ಲರ್‌ಗಳ ಸಹಿತ ಮೂವರನ್ನು ಬಂಧಿಸುವ ಮೂಲಕ ಎಸ್‌ಟಿಎಫ್ ಮಹತ್ತರ ಸೀಮೋಲ್ಲಂಘನ ಸಾಧಿಸಿದೆ.
ಶೆಹನಾಯ್ ವಾದ್ಯಗಳನ್ನು ಕದ್ದು ನಗರದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಜ್ರೆ ಹಸನ್ ನನ್ನು ಎಸ್‌ಟಿಎಫ್ ಬಂಧಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಅತ್ಯಮೂಲ್ಯ ಶೆಹನಾಯ್ ವಾದ್ಯಗಳು ಕಳವಾದ ಒಡನೆಯೇ ಪೊಲೀಸರು ಖಾನ್ ಅವರ ಮೊಮ್ಮಗನ ಚಲನ ವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಬಿಸ್ಮಿಲ್ಲಾ ಖಾನ್ ಅವರ ಮನೆಯಿಂದ ಕದಿಯಲಾಗಿದ್ದ ನಾಲ್ಕು ಬೆಳ್ಳಿಯ ಶೆಹನಾಯ್‌ಗಳಲ್ಲಿ ಮೂರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಈ ಶೆಹನಾಯ್‌ಗಳಲ್ಲಿನ ಬೆಳ್ಳಿಯನ್ನು ಜ್ಯುವೆಲ್ಲರ್‌ಗಳು ಅದಾಗಲೇ ಕರಗಿಸಿರುವುದು ಆಘಾತಕಾರಿಯಾಗಿದೆ.
ಹಾಗಿದ್ದರೂ ಪೊಲೀಸರು ಈ ಶೆಹನಾಯ್‌ಗಳಿಂದ ಕರಗಿಸಲಾದ 1.066 ಕಿಲೋ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಉಸ್ತಾದ್ ಅವರ ವಿಶ್ವ ಖ್ಯಾತಿಯ ಈ ಶೆಹನಾಯ್‌ಗಳನ್ನು ಸ್ಥಳೀಯವಾಗಿ ಕೇವಲ 17,000 ರೂ.ಗಳಿಗೆ ಮಾರಾಟ ಮಾಡಲಾಗಿತ್ತು.
ಕೆಲವು ಜನರಿಂದ ತಾನು ಪಡೆದಿದ್ದ ಸಾಲವನ್ನು ತೀರಿಸಲು ತಾನು ತನ್ನ ಅಜ್ಜನ ಶೆಹಾನಾಯ್‌ಗಳನ್ನು ಕದ್ದಿರುವುದು ಹೌದೆಂದು ಮೊಮ್ಮಗ ಹಸನ್ ತನಿಖಾಧಿಕಾರಿಗಳಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ಎಎಸ್‌ಪಿ ಎಸ್‌ಟಿಎಫ್ ಅಮಿತ್ ಪಾಠಕ್ ತಿಳಿಸಿದ್ದಾರೆ.
ಹಸನ್ ತನ್ನ ಅಜ್ಜನ ಅಮೂಲ್ಯ ಶೆಹನಾಯ್‌ಗಳನ್ನು ಸ್ಥಳೀಯ ಪಿಯಾರಿ ಪ್ರದೇಶದಲ್ಲಿನ ಜ್ಯುವೆಲ್ಲರ್‌ಗಳಾದ ಶಂಕರ್‌ಲಾಲ ಸೇಟ್ ಮತ್ತು ಸುಜಿತ್ ಸೇಟ್ ಅವರಿಗೆ ಮಾರಿದ್ದ. ಹಸನ್‌ನಿಂದ 4,200 ರೂ. ನಗದನ್ನು ವಶಪಡಿಸಿಕೊಂಡ ಪೊಲೀಸರು ಆ ಬಳಿಕ ಇಬ್ಬರೂ ಜ್ಯುವೆಲ್ಲರ್‌ಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪ್ರಕರಣದ ತನಿಖೆ ಮುಂದುವರಿದಿದೆ.