Advertisement

ಹೊಸ ಕಾರುಗಳಿಗೆ ಇನ್ನು ದೇಶದಲ್ಲೇ ಕ್ರ್ಯಾಶ್‌ ಟೆಸ್ಟ್‌: ಏನಿದು ಕಾರ್‌ ಕ್ರ್ಯಾಶ್‌ ಟೆಸ್ಟ್‌?

08:09 PM Jun 24, 2022 | Team Udayavani |

ನವದೆಹಲಿ: ಹೊಸತಾಗಿ ಕಾರು ಖರೀದಿ ಮಾಡುವ ಉದ್ದೇಶ ಇದೆಯೇ? ಮುಂದಿನ ದಿನಗಳಲ್ಲಿ ಆ ಕಾರು ಸುರಕ್ಷಿತವಾಗಿ ಇರಲಿದೆ ಎಂಬ ಪರೀಕ್ಷೆಯಲ್ಲೂ ತೇರ್ಗಡೆಯಾಗಬೇಕು. ಅದಕ್ಕಾಗಿ ಕ್ರ್ಯಾಶ್‌ ಟೆಸ್ಟ್‌ ನಿಯಮ ಜಾರಿಗೆ ತರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಶುಕ್ರವಾರ ಪ್ರಕಟಿಸಿದ್ದಾರೆ.

Advertisement

ಟೆಸ್ಟ್‌ನಲ್ಲಿ ಉತ್ತೀರ್ಣಗೊಂಡ ಕಾರುಗಳಿಗೆ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಅದರ ಆಧಾರದಲ್ಲಿ ಕಾರು ಸುರಕ್ಷಿತವಾಗಿದೆಯೇ ಇಲ್ಲವೋ ಎಂಬ ಬಗ್ಗೆ ಖಚಿತಗೊಳ್ಳಲಿದೆ.

ಇಂಥ ಕ್ರಮದಿಂದಾಗಿ ದೇಶದಲ್ಲಿ ಉತ್ಪಾದನೆಯಾಗುವ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ರಫ್ತು ಮಾಡುವ ಅರ್ಹತೆ ಹೆಚ್ಚಲಿದೆ. ದೇಶಿಯವಾಗಿ ಕೂಡ ಕಾರು ಉತ್ಪಾದಕರು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಇಂಥ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಭಾರತ ಹೊಸ ಕಾರು ಮೌಲ್ಯ ಮಾಪನ ವ್ಯವಸ್ಥೆ (ಭಾರತ್‌ ಎನ್‌ಸಿಎಪಿ) ಎಂಬ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತದೆ ಎಂದು ಅವರು ಸರಣಿ ಟ್ವೀಟ್‌ ಗಳಲ್ಲಿ ಪ್ರಕಟಿಸಿದ್ದಾರೆ.

ಇದೊಂದು ಗ್ರಾಹಕರನ್ನು ಕೇಂದ್ರೀಕರಿಸಿ ಮಾಡಲಾಗಿರುವ ವ್ಯವಸ್ಥೆ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ನಡೆಸಲಾಗುತ್ತಿರುವ ಕಾರು ಸುರಕ್ಷತಾ ಪರೀಕ್ಷೆ (ಕ್ರ್ಯಾಶ್‌ ಟೆಸ್ಟ್‌)ಗಳಿಗೆ ಇರುವ ನಿಯಮಗಳ ಅನ್ವಯ ಈ ವ್ಯವಸ್ಥೆ ಇರಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಆರೋಗ್ಯಕರ ಸ್ಪರ್ಧೆಗೆ ಅವಕಾಶ:
ಕಾರು ಉತ್ಪಾದನೆಗೆ ಬೇಕಾಗುವ ಕೆಲವು ವಸ್ತುಗಳನ್ನು ತಯಾರಿಸುವ ಮೂಲ ವಸ್ತುಗಳ ತಯಾರಕರ (ಒರಿಜಿನಲ್‌ ಇಕ್ವಿಪ್‌ಮೆಂಟ್‌ ಮಾನ್ಯುಫ್ಯಾಕ್ಚರರ್ಸ್‌- ಒಇಎಂ) ನಡುವೆ ಆರೋಗ್ಯಕರ ಸ್ಪರ್ಧೆ ಹೊಂದುವ ನಿಟ್ಟಿನಲ್ಲಿ ಕ್ರ್ಯಾಶ್‌ ಟೆಸ್ಟ್‌ ನೆರವಾಗಲಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಕರಡು ನಿಯಮಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

Advertisement

ಏನಿದು ಕಾರ್‌ ಕ್ರ್ಯಾಶ್‌ ಟೆಸ್ಟ್‌?
ನಿಗದಿತ ಕಾರು ಉತ್ಪಾದಕ ಸಂಸ್ಥೆಯ ಕಾರು ಪ್ರಯಾಣಿಕರ ಬಳಕೆಗೆ ಯೋಗ್ಯ ಮತ್ತು ಸುರಕ್ಷಿತವಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ನಡೆಸುವ ಪರೀಕ್ಷೆ. ಪ್ರಯಾಣಿಕರ ಮಾದರಿಯಲ್ಲಿ ಕಾರು ಚಲಾಯಿಸುವಂತೆ ಮಾಡಿ, ಅದನ್ನು ತಡೆಗೆ ಡಿಕ್ಕಿ ಹೊಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕಾರಿಗೆ ಯಾವ ರೀತಿಯಾಗಿ ಹಾನಿಯಾಗಿದೆ, ಅದರಲ್ಲಿ ಇರಿಸಲಾಗಿರುವ ಪ್ರಯಾಣಿಕರ ಮಾದರಿಗೆ ಎಲ್ಲೆಲ್ಲ ಘಾಸಿಯಾಗಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ಈ ಕ್ರ್ಯಾಶ್‌ ಟೆಸ್ಟ್‌ನಲ್ಲಿ ತೇರ್ಗಡೆಯಾಗುವುದಕ್ಕೆ ಶ್ರೇಯಾಂಕ ನೀಡಲಾಗುತ್ತದೆ. ಎಂಜಿನ್‌ನ ಗುಣಮಟ್ಟ, ಶಾಕ್‌ ಅಬಾರ್‌ಬರ್‌ಗಳು, ಬ್ರೇಕ್‌, ಏರ್‌ಬ್ಯಾಗ್‌ ಸೂಕ್ತ ಸಮಯದಲ್ಲಿ ಓಪನ್‌ ಆಗಿದೆಯೇ ಸೇರಿದಂತೆ ಸಮಗ್ರ ಅಂಶಗಳ ಅಧ್ಯಯನ ನಡೆಸಲಾಗುತ್ತದೆ.

ರ್‍ಯಾಂಕಿಂಗ್‌ ಹೇಗೆ 1 ರಿಂದ 5ರ ನಡುವೆ
ದೇಶದಲ್ಲಿ ಇದುವರೆಗೆ ಹೇಗಿತ್ತು?
ಸದ್ಯ ದೇಶದಲ್ಲಿನ ಕಾರು ಉತ್ಪಾದಕ ಸಂಸ್ಥೆಗಳು ವಿದೇಶಗಳಲ್ಲಿ ಕ್ರ್ಯಾಶ್‌ ಟೆಸ್ಟ್‌ ನಡೆಸುತ್ತಿದ್ದವು.

ಹೇಗೆ ಇರಲಿದೆ ಹೊಸ ವ್ಯವಸ್ಥೆ?
– ಇನ್ನು ಮುಂದೆ ದೇಶದಲ್ಲಿಯೇ ಕಾರುಗಳ ಕ್ರ್ಯಾಶ್‌ ಟೆಸ್ಟ್‌
– ಅದಕ್ಕಾಗಿ ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಂ ವ್ಯವಸ್ಥೆ ಜಾರಿ
– ಕಾರು ಉತ್ಪಾದಕರಿಗೆ ಸ್ವಯಂ ಪ್ರೇರಣೆಯಿಂದ ಅದರಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ
– ಜಗತ್ತಿನ ಇತರ ದೇಶಗಳಲ್ಲಿ ಇರುವಂತೆ ಮಾನದಂಡ ಅನುಸರಣೆ
– ಶೇ.50ರಷ್ಟು ರಸ್ತೆ ಅಪಘಾತ ತಡೆ ಉದ್ದೇಶ

ಉದ್ದೇಶವೇನು?
– ದೇಶವನ್ನು ಅಟೊಮೊಬೈಲ್‌ ಕ್ಷೇತ್ರವನ್ನು ಜಗತ್ತಿನ ಹಬ್‌ ಆಗಿ ಮಾರ್ಪಾಡು ಮಾಡುವುದು
– ಆತ್ಮನಿರ್ಭರ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಲು ಆದ್ಯತೆ

2020ರಲ್ಲಿ ರಸ್ತೆ ಅಪಘಾತ
3,66,138- ಒಟ್ಟು ರಸ್ತೆ ದುರಂತ
1,31,714- ಒಟ್ಟು ಸಾವಿನ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next