Advertisement

ಪುತ್ತಿಲದಲ್ಲಿ ಭಾರತ ಮಾತಾ ಪೂಜನಾ; ಪುತ್ತೂರಿನಲ್ಲಿ ಯೋಗಿ ರೋಡ್‌ ಶೋ

07:03 PM May 05, 2023 | Team Udayavani |

ಪುತ್ತೂರು: ಪಕ್ಷೇತರವಾಗಿ ಚುನಾವಣೆಗೆ ನಿಂತ ಅಭ್ಯರ್ಥಿ ಸ್ವಂತ ಸಾಮರ್ಥ್ಯದಿಂದ ಮತ ಕೇಳಲಿ. ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಅವರ ಹೆಸರು ಹೇಳಿಕೊಂಡು ಮತ ಕೇಳುವುದು ಬೇಡ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಡಾ|ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

Advertisement

ಪುತ್ತಿಲ ಕೆರೆಮನೆ ಕಟ್ಟೆಯಲ್ಲಿ ನಡೆದ ಭಾರತ್‌ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಪಕ್ಷ, ಸಂಘಟನೆಯ ಚೌಕಟ್ಟಿನಲ್ಲಿ ಇಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸುವವರಿಂದ ಸಮಾಜದ ರಕ್ಷಣೆ ಸಾಧ್ಯವಿಲ್ಲ. ಅಂತಹ ಹಿಂದುತ್ವ ಅದು ಸ್ವಾರ್ಥಕೋಸ್ಕರ ಮಾತ್ರ ಹೊರತು ಸಮಾಜಕೋಸ್ಕರ ಅಲ್ಲ ಎಂದು ಡಾ|ಭಟ್‌ ಹೇಳಿದರು.

ಭಾರತದ ಇತಿಹಾಸ ಸಾವಿರಾರು ವರ್ಷದ್ದು. ಈ ದೇಶ ಸುಮ್ಮನೆ ಬದುಕಿ ಬರಲಿಲ್ಲ. ಸಾಯುವವರನ್ನು ಬದುಕುವ ಹಾಗೆ ಮಾಡಿರುವ, ಜೀವನದ ದೃಷ್ಟಿ ನೀಡಿರುವ ದೇಶ ನಮ್ಮದು. ಭಾರತದ ಮೂಲ ಚಿಂತನೆಯಿಂದ ಜಗತ್ತಿನ ಇತರ ದೇಶದವರು ಪೂಜನೀಯ ಭಾವನೆಯಿಂದ ನೋಡಿದರೆ ನಮ್ಮ ದೇಶದವರು ಭಾರತವನ್ನು ಪೂಜಿಸುತ್ತಾರೆ. ಭಾರತ ಆಧ್ಯಾತ್ಮಿಕ ಚಿಂತನೆ ಮಾಡಿಕೊಂಡು ಬಂದಿರುವ ದೇಶ. ಧರ್ಮ, ಸಂಸ್ಕೃತಿ ಆಧಾರದಲ್ಲಿ ಜೀವನ ಮೌಲ್ಯ ಇಟ್ಟುಕೊಂಡು ಬಂದಿರುವ ದೇಶ ಎಂದರು.

ಮೇ 10 ರಂದು ಉತ್ತರ ನೀಡಿ
1951ರಲ್ಲಿ ಜನಸಂಘ ಆರಂಭವಾಯಿತು. ಸಂಘಟನೆಕ್ಕೋಸ್ಕರ ಬಲಿದಾನ ಶುರುವಾಯಿತು. ಪ್ರಾರಂಭದ ಬಲಿದಾನ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಮೂಲಕ ಆಯಿತು ಎಂದ ಕಲ್ಲಡ್ಕ ಪ್ರಭಾಕರ ಭಟ್‌, ಹಿಂದುತ್ವವೇ ಮೂಲ ಚಿಂತನೆ ಎಂದು ಬೆಳೆದುಕೊಂಡು ಬಂದಿರುವ ಪಕ್ಷ ಬಿಜೆಪಿ. ಅದಕ್ಕೋಸ್ಕರ ಭಾರತೀಯ ಜನತಾ ಪಾರ್ಟಿಯನ್ನು ಬೆಳೆಸಿಕೊಂಡು ಬರಲಾಗಿದೆ. ಪಿಎಫ್‌ಐಯಂತಹ ದೇಶದ್ರೋಹದ ಸಂಘಟನೆಯನ್ನು ದಮನ ಮಾಡಲು ಮೇ 10ರಂದು ಒಳ್ಳೆಯ ಕಾಲ ಎಂದು ಅವರು ಹೇಳಿದರು.

ಹಿಂದೂ ನಾಯಕನಾಗಲು ಎಂಎಲ್‌ಎ ಆಗಬೇಕೇ..?
ಹಿಂದೂ ಜಾಗರಣಾ ವೇದಿಕೆಯ ಗೌರವಾಧ್ಯಕ್ಷ ಡಾ|ಎಂ.ಕೆ.ಪ್ರಸಾದ್‌ ಭಂಡಾರಿ ಮಾತನಾಡಿ, ದೇವಸ್ಥಾನದ ಕಾರ್ಯಕ್ರಮಕ್ಕೆ ಕೋರ್ಟ್‌ನಿಂದ ತಡೆ ತರುವುದು ಹಿಂದುತ್ವವೇ, ಹಿಂದೂ ನಾಯಕ ಆಗಬೇಕಾದರೆ ಎಂಎಲ್‌ಎ ಆಗಬೇಕೇ ಎಂದು ಪ್ರಶ್ನಿಸಿದ ಅವರು ಹುದ್ದೆಯ ಆಸೆಗೋಸ್ಕರ ಹಿಂದುತ್ವ ಬಳಸುವುದು ಸರಿಯಲ್ಲ ಎಂದರು.
ಕಾಂಗ್ರೆಸ್‌ ಪಕ್ಷದವರು ದೇಶಕ್ಕೆ ಯಾವುದೇ ಒಳ್ಳೆಯ ಕೆಲಸ ಮಾಡುವುದನ್ನು ವಿರೋಧಿಸುತ್ತಾರೆ. ಮತಾಂತರ, ದೇಶದ್ರೋಹ ಕೆಲಸ ಮಾಡುವುದೇ ಅವರ ಜಾಯಮಾನ. ಮೋದಿ ಪ್ರಧಾನಿ ಆದ ಮೇಲೆ ಇದಕ್ಕೆ ಕಡಿವಾಣ ಬಿದ್ದಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಕೇಸರಿ ಶಾಲು ಧರಿಸಿದ್ದು ಇಡೀ ಪರಿಸರ ಕೇಸರಿಮಯವಾಗಿತ್ತು.

ನಾಳೆ ಪುತ್ತೂರಿನಲ್ಲಿ ಯೋಗಿ ಆದಿತ್ಯನಾಥ್‌ ರೋಡ್‌ ಶೋ
ಪುತ್ತೂರು ಹಾಗೂ ಸುಳ್ಯ ಬಿಜೆಪಿ ಅಭ್ಯರ್ಥಿಗಳಾದ ಆಶಾ ತಿಮ್ಮಪ್ಪ ಮತ್ತು ಭಾಗೀರಥಿ ಮುರುಳ್ಯ ಅವರ ಪರವಾಗಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಮೇ 6 ರಂದು ಪುತ್ತೂರು ನಗರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಮೊಟ್ಟೆತ್ತಡ್ಕ ಹೆಲಿಪ್ಯಾಡಿನಿಂದ ನಗರಕ್ಕೆ ಆಗಮಿಸಲಿರುವ ಯೋಗಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 11.30 ರಿಂದ ಪ್ರಧಾನ ಅಂಚೆ ಕಚೇರಿ ಬಳಿಯಿಂದ ರೋಡ್‌ ಶೋ ಆರಂಭಗೊಂಡು ಮುಖ್ಯರಸ್ತೆ ಮೂಲಕ ಬಸ್‌ ನಿಲ್ದಾಣಕ್ಕೆ ಬಂದು ಅಲ್ಲಿಂದ ಕೋರ್ಟ್‌ ರಸ್ತೆಯಾಗಿ ಕಿಲ್ಲೆ ಮೈದಾನಕ್ಕೆ ಆಗಮಿಸಲಿದೆ. ಅಲ್ಲಿ ವಾಹನದಿಂದಲೇ ಯೋಗಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ್‌, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next