Advertisement
ಎರಡು ರಾಷ್ಟ್ರೀಯ ಪಕ್ಷಗಳ ಈ ಜಂಗೀಕುಸ್ತಿಯಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ ಪಡಬೇಕಿದೆ. ಕಾವೇರಿ ಕೊಳ್ಳದ ಪ್ರದೇಶದಲ್ಲಿ ಕಳೆದ ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ನೆಲ ಕಚ್ಚಿದ ಕಾಂಗ್ರೆಸ್ಸಿಗೆ ಈಗ ಪಕ್ಷದ ನೇತಾರ ರಾಹುಲ್ ಗಾಂಧಿ ಅವರ ಭಾರತ್ ಐಕ್ಯತಾ ಯಾತ್ರೆ ತಳಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಖಂಡಿತವಾಗಿಯೂ ಟಾನಿಕ್ ನೀಡಿದೆ.
Related Articles
Advertisement
ಬಿಜೆಪಿಗೆ ತಳಮಳ ಶುರು: ಕಾವೇರಿ ಕಣಿವೆ ಪ್ರದೇಶ ದಲ್ಲಿ ಭಾರತ್ ಜೋಡೋ ಯಾತ್ರೆಯು ಬಿಜೆಪಿಗೆ ತಳಮಳ ತಂದಿದೆ. ಯಾತ್ರೆ ಕುರಿತು ಬಿಜೆಪಿ ನಾಯಕರು ನಿರಂತರವಾಗಿ ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಯಾಗಿದೆ. ಮುಂದಿನ ಅಸೆಂಬ್ಲಿ ಚುನಾವಣೆಗೆ ಟಾರ್ಗೆಟ್-150 ಎಂದು ಗುರಿ ಹೊಂದಿ ಹಳೇ ಮೈಸೂರು ಭಾಗದಲ್ಲಿ ಉತ್ಸಾಹದಲ್ಲಿ ಮುನ್ನುಗ್ಗಿದ ಕಮಲ ಪಾಳ ಯಕ್ಕೆ ಕಾಂಗ್ರೆಸ್ ಯಾತ್ರೆ ಬ್ರೇಕ್ ಹಾಕಿದೆ.
ಕಮಲ ಪಾಳಯದಲ್ಲಿ ಅಸಮಾಧಾನ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ರಾಜ್ಯ ಬಿಜೆಪಿ ಗ್ರಹಿಸಿದ ರೀತಿ ಹಾಗೂ ನೀಡಿದ ಹೇಳಿಕೆಗಳ ಬಗ್ಗೆಯೇ ಬಿಜೆಪಿಯ ಕೆಲವು ಹಿರಿಯ ನಾಯಕರಲ್ಲಿ ಅಸಮಾಧಾನವಿದೆ. ಯಾತ್ರೆಯನ್ನು ಇದರ ಪಾಡಿಗೆ ಸಾಗಲು ಬಿಟ್ಟು ಆ ಬಗ್ಗೆ ಹೆಚ್ಚು ಮಾತಾಡದಿದ್ದರೆ ಸೂಕ್ತ ವಾಗಿತ್ತು. ಆದರೆ, ವಿನಾಕಾರಣ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕೆಗಳನ್ನು ಮಾಡಿ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರವಾಗುವಂತೆ ತಮ್ಮ ಪಕ್ಷವೇ ಅವಕಾಶ ಕಲ್ಪಿಸಿತು ಎಂಬ ಅಸಮಾಧಾನ ಕಮಲ ಪಾಳಯದಲ್ಲಿದೆ.
ಬಿಜೆಪಿ, ಜೆಡಿಎಸ್‌ನಿಂದಲೂ ಪಾದಯಾತ್ರೆ : ಭಾರತ್ ಜೋಡೋ ಯಾತ್ರೆಯ ಕಾವನ್ನು ಅಸೆಂಬ್ಲಿ ಚುನಾವಣೆವರೆಗೂ ಕಾಪಾಡಿಕೊಳ್ಳುವುದು ಕಾಂಗ್ರೆಸ್ಸಿಗೂ ಸವಾಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಥಯಾತ್ರೆ ಹಮ್ಮಿ ಕೊಂಡಿದ್ದಾರೆ. ಕಾಂಗ್ರೆಸ್ಸಿನ ತಂತ್ರಗಳಿಗೆ ಪ್ರತಿತಂತ್ರ ಹೂಡಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅ.11 ರಿಂದ ರಾಯಚೂರಿನಿಂದ ಪ್ರವಾಸ ಆರಂಭಿಸಲಿದ್ದಾರೆ. ಜೆಡಿಎಸ್ ನ.1ರಿಂದ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಿದೆ. ಭಾರತ್ ಜೋಡೋ ಯಾತ್ರೆ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕಾವೇರಿ ಕಣಿವೆ ಪ್ರದೇಶದಲ್ಲಿ ಹಾದು ಹೋಗುತ್ತಿರುವುದು ಆ ಪಕ್ಷಕ್ಕೆ ಸವಾಲು ಒಡ್ಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಮಂಡ್ಯ ಜಿಲ್ಲೆಗೆ ಬಂದ ಮಾತ್ರಕ್ಕೆ ಅಲ್ಲೇನೂ ಬದಲಾವಣೆ ಆಗುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಅವರ ಪಕ್ಷಕ್ಕೆ ಪ್ರಮುಖ ಎದುರಾಳಿ ಕಾಂಗ್ರೆಸ್ ಎಂಬುದನ್ನು ಅವರು ಮರೆಯುವಂತಿಲ್ಲ.
–ಕೂಡ್ಲಿ ಗುರುರಾಜ