ಬೆಂಗಳೂರು: ರಾಹುಲ್‌ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಸೆ.30ಕ್ಕೆ ರಾಜ್ಯ ಪ್ರವೇಶ ಮಾಡಲಿದ್ದು ಭರ್ಜರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅ.7 ಅಥವಾ 8ರಂದು ಯಾತ್ರೆಯಲ್ಲಿ ಸೋನಿಯಾಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸಹ ಭಾಗಿಯಾಗುವ ಸಾಧ್ಯತೆಯಿದೆ. ಆದರೆ, ಇನ್ನೂ ಎಐಸಿಸಿ ವತಿಯಿಂದ ಅಧಿಕೃತವಾಗಿ ದೃಢಪಡಿಸಿಲ್ಲ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಂತರ ಸಭೆಗಳನ್ನು ಮಾಡಿ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರೂಪು-ರೇಷೆ ಹಾಕಿಕೊಂಡಿದ್ದಾರೆ.
ಶನಿವಾರವೂ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್‌ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಚೆಲುವರಾಯ ಸ್ವಾಮಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಸೆ. 30 ರಂದು ಯಾತ್ರೆ ಗುಂಡ್ಲುಪೇಟೆ ಪ್ರವೇಶಿಸಲಿದ್ದು, ಅಂದೇ ಸುಮಾರು 20-25 ಕಿ.ಮೀ ಪಾದಯಾತ್ರೆ ನಡೆಯಲಿದೆ.