Advertisement

ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಗೆ ಇಂದು ಚಾಲನೆ

07:42 PM Sep 06, 2022 | Team Udayavani |

ನವದೆಹಲಿ: ಬುಧವಾರ ಕನ್ಯಾಕುಮಾರಿಯಲ್ಲಿ ಚಾಲನೆ ಸಿಗಲಿರುವ ಕಾಂಗ್ರೆಸ್‌ನ “ಭಾರತ್‌ ಜೋಡೋ ಯಾತ್ರೆ’ಯಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಒಟ್ಟು 119 ಮಂದಿ “ಭಾರತ್‌ ಯಾತ್ರಿ’ಗಳು ಪಾದಯಾತ್ರೆಯುದ್ದಕ್ಕೂ ಹೆಜ್ಜೆ ಹಾಕಲಿದ್ದಾರೆ.

Advertisement

ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಯಾತ್ರೆ ನಡೆಯಲಿದ್ದು, 5 ತಿಂಗಳ ಬಳಿಕ ಸಮಾರೋಪಗೊಳ್ಳಲಿದೆ. ಪ್ರಮುಖ 119 ಭಾರತ್‌ ಯಾತ್ರೆಗಳಲ್ಲದೇ, ಭದ್ರತಾ ಸಿಬ್ಬಂದಿ, ಫೋಟೋಗ್ರಾಫ‌ರ್‌ಗಳು, ಸಾಮಾಜಿಕ ಮಾಧ್ಯಮ ಸಿಬ್ಬಂದಿ ಸೇರಿದಂತೆ ಪಕ್ಷದ ಸಂವಹನಾ ತಂಡ ಮತ್ತು ವೈದ್ಯಕೀಯ ತಂಡವೂ ಯಾತ್ರೆಯೊಂದಿಗೆ ತೆರಳಲಿದ್ದು, ಒಟ್ಟಾರೆ ಸಂಖ್ಯೆ 300ರಷ್ಟಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿರುವವರ ಸರಾಸರಿ ವಯಸ್ಸು 38. ಆದರೆ, ರಾಜಸ್ಥಾನದ 58 ವರ್ಷದ ವಿಜೇಂದ್ರ ಸಿಂಗ್‌ ಮಹ್ಲಾವತ್‌ ಅವರೂ ಭಾಗಿಯಾಗಲಿದ್ದು, ಅವರು ಕಾಂಗ್ರೆಸ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ. ಇನ್ನು ಅರುಣಾಚಲ ಪ್ರದೇಶದ 25 ವರ್ಷ ವಯಸ್ಸಿನ ಅಜಂ ಜೋಂಬ್ಲಾ ಮತ್ತು ಬೇಮ್‌ ಬಾಯಿ ಅವರು ಅತಿಕಿರಿಯ ಭಾರತ್‌ ಯಾತ್ರಿಗಳು. 119 ಮಂದಿಯಲ್ಲಿ 28 ಮಂದಿ ಮಹಿಳೆಯರೂ ಇರಲಿದ್ದಾರೆ.

ಬಿಳಿ ಬಣ್ಣದ ವಸ್ತ್ರ:
ಎಲ್ಲ ಯಾತ್ರಿಗಳೂ ಬಿಳಿ ಬಣ್ಣದ ವಸ್ತ್ರಗಳನ್ನೇ ಧರಿಸುವ ಮೂಲಕ ಏಕರೂಪತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. 3 ದಿನಗಳಿಗೊಮ್ಮೆ ಅಂದರೆ ನಗರಪ್ರದೇಶ ತಲುಪಿದಾಗ ಲಾಂಡ್ರಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಬೆಳಗ್ಗೆ 7ರಿಂದ 10, ನಂತರ ವಿರಾಮ, ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 7ರವರೆಗೆ ನಡೆಯುತ್ತಾ, ದಿನಕ್ಕೆ 22-23 ಕಿ.ಮೀ. ಪಾದಯಾತ್ರೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ತ್ರಿವರ್ಣ ಧ್ವಜ ಹಸ್ತಾಂತರ:
ಬುಧವಾರ ಬೆಳಗ್ಗೆ ರಾಹುಲ್‌ ಗಾಂಧಿಯವರು ಶ್ರೀಪೆರಂಬದೂರ್‌ನಲ್ಲಿರುವ ರಾಜೀವ್‌ ಗಾಂಧಿ ಸ್ಮಾರಕಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆ ವೇಳೆ ಕನ್ಯಾಕುಮಾರಿ ತಲುಪಲಿದ್ದಾರೆ. ಯಾತ್ರೆ ಆರಂಭಕ್ಕೂ ಮುನ್ನ ರಾಹುಲ್‌ ಅವರು ಸ್ವಾಮಿ ವಿವೇಕಾನಂದ ರಾಕ್‌ ಮೆಮೋರಿಯಲ್‌, ತಿರುವಳ್ಳುವರ್‌ ಪ್ರತಿಮೆ ಮತ್ತು ಕಾಮರಾಜ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಮಹಾತ್ಮ ಗಾಂಧಿ ಮಂಟಪಂಗೆ ತೆರಳಲಿದ್ದಾರೆ. ಅಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ರಾಜಸ್ಥಾನ ಸಿಎಂ ಅಶೋಕ್‌ ಗೆಹೊÉàಟ್‌ ಮತ್ತು ಛತ್ತೀಸ್‌ಗಡ ಸಿಎಂ ಭೂಪೇಶ್‌ ಬಘೇಲ್‌ ಅವರು ರಾಹುಲ್‌ಗೆ ತ್ರಿವರ್ಣಧ್ವಜವನ್ನು ಹಸ್ತಾಂತರಿಸಲಿದ್ದಾರೆ. ನೈಜ ಪ್ರಯಾಣವು ಗುರುವಾರದಿಂದ ಆರಂಭವಾಗಲಿದೆ.

Advertisement

ಕರ್ನಾಟಕಕ್ಕೆ ಯಾವಾಗ?
ಸೆ.11ರಂದು ಪಾದಯಾತ್ರೆಯು ಕೇರಳ ತಲುಪಲಿದ್ದು, 18 ದಿನಗಳ ಕಾಲ ಕೇರಳದುದ್ದಕ್ಕೂ ಸಂಚರಿಸಲಿದೆ. ಸೆ.30ರಂದು ಕರ್ನಾಟಕ ತಲುಪಲಿರುವ ಭಾರತ್‌ ಯಾತ್ರಿಗಳು ಬರೋಬ್ಬರಿ 21 ದಿನಗಳ ಕಾಲ ರಾಜ್ಯದ ವಿವಿಧೆಡೆ ಸಂಚರಿಸಲಿದ್ದಾರೆ. ಅಕ್ಟೋಬರ್‌ 17ರಂದು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬೆಂಗಳೂರು ಕಾಂಗ್ರೆಸ್‌ ಕಚೇರಿಯಲ್ಲೇ ಎಲ್ಲ ಯಾತ್ರಿಗಳಿಗೂ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಷ್ಟು ಕಿ.ಮೀ. ಯಾತ್ರೆ?- 3,670
ಎಷ್ಟು ರಾಜ್ಯಗಳಲ್ಲಿ ನಡಿಗೆ?- 12
ಭಾರತ್‌ ಯಾತ್ರಿಗಳ ಸಂಖ್ಯೆ- 119
ಈ ಪೈಕಿ ಮಹಿಳಾ ಯಾತ್ರಿಗಳು- 28
ಯಾತ್ರೆ ನಡೆಯುವ ಅವಧಿ – 5 ತಿಂಗಳು
ಪ್ರತಿ ದಿನ ಎಷ್ಟು ಕಿ.ಮೀ. ನಡಿಗೆ?- 22-23

ದೇಶದಲ್ಲಿ ಜನರ ನೈಜ ಸಮಸ್ಯೆಯನ್ನು ಚರ್ಚಿಸದೇ, ನಕಾರಾತ್ಮಕ ರಾಜಕೀಯವನ್ನೇ ಮಾಡಲಾಗುತ್ತಿರುವ ಕಾರಣ ಇಂಥದ್ದೊಂದು ಯಾತ್ರೆಯ ಅಗತ್ಯವಿತ್ತು. ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲೂ ಈ ಯಾತ್ರೆ ಮಹತ್ವದ್ದಾಗಿದೆ.
– ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

 

Advertisement

Udayavani is now on Telegram. Click here to join our channel and stay updated with the latest news.

Next