ನವದೆಹಲಿ : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ, ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಬ್ಬಿಸಿರುವ ದ್ವೇಷವನ್ನು ಎದುರಿಸಲು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
ಭಾರೀ ಹಿಮಪಾತದ ನಡುವೆ ಭಾರತ್ ಜೋಡೋ ಯಾತ್ರೆಯ ಸಮಾಪ್ತಿಯ ದಿನದಂದು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯತ್ವವನ್ನು ಪುನಃಸ್ಥಾಪಿಸಲು ಗಾಂಧಿ ನಿರ್ಧರಿಸಿದ್ದಾರೆ. ಯಾತ್ರೆಯು ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ, ದ್ವೇಷದ ವಿರುದ್ಧವಾಗಿತ್ತು. ಬಿಜೆಪಿಯವರು ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರದಂತಹ ವಿಷಯಗಳಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶವನ್ನು ಒಂದುಗೂಡಿಸಬಹುದು ಎಂಬುದನ್ನು ರಾಹುಲ್ ಗಾಂಧಿ ಸಾಬೀತುಪಡಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಬಡವರು-ಶ್ರೀಮಂತರ ವಿಭಜನೆಯನ್ನು ವಿಸ್ತರಿಸುವ ನೀತಿಯನ್ನು ಅನುಸರಿಸುತ್ತಿವೆ ಎಂದು ಖರ್ಗೆ ಆರೋಪಿಸಿದರು.
”ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಬಡವರನ್ನು ಬಡವರನ್ನಾಗಿಯೇ ಇರಿಸಲು ಮತ್ತು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲು ಬಯಸುತ್ತವೆ. ಶೇಕಡಾ 10 ರಷ್ಟು ಜನರು ದೇಶದ ಶೇಕಡಾ 72 ರಷ್ಟು ಸಂಪತ್ತನ್ನು ಲೂಟಿ ಮಾಡುತ್ತಿದ್ದರೆ, ಶೇಕಡಾ 50 ರಷ್ಟು ಜನರು ಕೇವಲ ಮೂರು ಶೇಕಡಾವನ್ನು ಹೊಂದಿದ್ದಾರೆ ಎಂದರು.
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಜನರು ಯಾತ್ರೆಗೆ ಸೇರುತ್ತಾರೆಯೇ ಎಂಬ ಆತಂಕವೂ ಇತ್ತು.ನನ್ನ ಸಹೋದರ ಕಳೆದ ಐದು ತಿಂಗಳಿನಿಂದ ಕನ್ಯಾಕುಮಾರಿಯಿಂದ ನಡೆದುಕೊಂಡು ಬರುತ್ತಾರೆ ಅನ್ನುವುದು ಮೊದಲೇ ನನಗೆಅನ್ನಿಸಿತ್ತು, ಜನರು ಎಲ್ಲೆಡೆ ಹೊರಬಂದರು. ದೇಶದ ಜನರು ಏಕತೆಯ ಮನೋಭಾವವನ್ನು ಹೊಂದಿದ್ದರಿಂದ ಅವರು ಹೊರಬಂದರು ”ಎಂದರು.