ಕುಮಟಾ: ಭಾರತ್ ಜೋಡೋ ಯಾತ್ರೆಯಿಂದ ದೇಶದ ಜನರ ಮನಸ್ಸು ಬೆಸೆದವರು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕುಮಟಾದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ-2 ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ರಾಜಕಾರಣದಲ್ಲಿ ಬದಲಾವಣೆ ಕಾಣುತ್ತಿದೆ. ಕಾಂಗ್ರೆಸ್‌ನವರು ಒಟ್ಟಾಗಿದ್ದು, ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಿ. ಹಿಂದೆ ಡಬ್ಬಲ್ ಎಂಜಿನ್ ಸರಕಾರ ಇತ್ತು. ಅವರು ಮಾಡಿದ್ದೇನು? ಅವರ ಕೃತ್ಯಗಳಿಂದ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿ ಮಾತು ಕೊಟ್ಟಂತೆ ನಡೆದಿಲ್ಲ, ರೈತರ ಆದಾಯ ಹೆಚ್ಚಾಗಿಲ್ಲ ಎಂಬುದನ್ನು ಬಿಜೆಪಿಯವರು ನಿಮ್ಮ ಬಳಿ ಬಂದಾಗ ಪ್ರಶ್ನಿಸಿ. ನಾವು ನುಡಿದಂತೆ ನಡೆದಿದ್ದೇವೆ. ಉತ್ತರ ಕನ್ನಡ ಜಿಲ್ಲೆಯವರು ಉತ್ತಮ ಸಂಸ್ಕೃತಿ ಜನ. ನೀವು ಯೋಚಿಸಿ, ಬಿಜೆಪಿಯಿಂದ ಒಂದು ಒಳ್ಳೆಯ ಕೆಲಸ ಆಗಿದ್ದರೆ ಹೇಳಿ ಎಂದು ಸಭಿಕರನ್ನು ಪ್ರಶ್ನಿಸಿದರು.
ಬಂಗಾರಪ್ಪ ಆಶ್ರಯ, ಆರಾಧನಾ, ವಿಶ್ವ ಯೋಜನೆ ತಂದರು. ದೇವರಾಜ ಅರಸು ಕಾಲದಲ್ಲಿ ಉಳುವವರಿಗೆ ಭೂಮಿ ಕೊಟ್ಟೆವು. ಗುಂಡೂರಾವ್, ಕೃಷ್ಣ, ಸಿದ್ದರಾಮಯ್ಯ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಹೊಸ ಬೆಳಕು ತಂದಿವೆ. ನೀವು ಇವುಗಳನ್ನು ನೆನಪಿಸಿಕೊಳ್ಳಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಹಿ ಮಾಡಿದ ಕಾರ್ಡ್ ನಿಮಗೆ ತಲುಪಿದೆ. ಮಹಾಲಕ್ಷ್ಮಿ ವರ್ಷಕ್ಕೆ ಒಂದು ಲಕ್ಷ ತರುವವಳಿದ್ದಾಳೆ. ಈಗ ಗೃಹಲಕ್ಷ್ಮಿಈಗಾಗಲೇ ನಿಮ್ಮ ಮನೆ ಬೆಳಗಿದ್ದಾಳೆ ಎಂದರು.
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ಖಚಿತ. ಜನರಿಗೆ ಆರೋಗ್ಯ ವಿಮೆ, ಆಸ್ಪತ್ರೆ ಬಿಲ್ ಝೀರೋ ಬರುವಂತೆ ಮಾಡುತ್ತೇವೆ. ದಕ್ಷಿಣ ಕನ್ನಡದವರು ಕಟ್ಟಿದ ಬ್ಯಾಂಕ್‌ಗಳನ್ನು ಬಿಜೆಪಿಯವರು ಮುಚ್ಚಿದರು. ಕರ್ನಾಟಕಕ್ಕೆ ದ್ರೋಹ ಮಾಡಿದರು. ಹಾಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕ್ಷೇತ್ರಗಳನ್ನು ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು. ಅಂಜಲಿ ನಿಂಬಾಳ್ಕರ್ ಹೆಸರು ಹೇಳದೇ ಡಿ.ಕೆ. ಶಿವಕುಮಾರ್ ಮತಯಾಚನೆ ಮಾಡಿದರು.