ಮುಂಬಯಿ: ಬ್ಯಾಂಕಿನ ಅಸ್ತಿತ್ವಕ್ಕೆ ಸವಾಲಾಗಿರುವ ಎನ್‌ಪಿಎ (ಅನುತ್ಪಾದಕ ಆಸ್ತಿ)ಯನ್ನು ಶೂನ್ಯಗೊಳಿಸಿ, ಸಾಲದ ಮರುಪಾವತಿಗೆ ಹೆಚ್ಚಿನ ಆದ್ಯತೆಯೊಂದಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂತರ್ಜಾಲದ ಮೂಲಕ ಆವಿಷ್ಕಾರ ಗೊಂಡ ಕ್ಷಣಾರ್ಧದ ಸೇವೆಗಳನ್ನು ಖಾತೆದಾರರಿಗೆ, ಹಿತೈಷಿಗಳಿಗೆ ಸವಿಸ್ತಾರವಾಗಿ ತಿಳಿಸಿ, ಭಾರತ್ ಬ್ಯಾಂಕಿನ ಶ್ರೇಷ್ಠತೆಯನ್ನು ಹೆಚ್ಚಿಸಬೇಕು ಎಂದು ಭಾರತ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಇದರ ಅಧ್ಯಕ್ಷ ರಮೇಶ್ ಟಿ. ಪೂಜಾರಿ ಅವರು ನುಡಿದರು.
ಜೂ. 23 ರಂದು ಗೋರೆಗಾಂವ್ ಪಶ್ಚಿಮದ ಲಲಿತ್ ಬ್ಯಾಂಕ್ವೆಟ್ ಸಭಾಗೃಹದಲ್ಲಿ ನಡೆದ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ಭಾರತ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಮಾತೃ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಿತ ಭಾರತ್ ಬ್ಯಾಂಕ್ ಆರ್ಥಿಕವಾಗಿ ಸಹಕರಿಸಿ ಸ್ವಾವಲಂಬಿ ಬದುಕಿಗೆ ಹೆಚ್ಚಿನ ಪ್ರಾಶಸ್ತÂ ನೀಡಿದೆ. ನಿರ್ದೇಶಕ ಮಂಡಳಿ, ಹಿರಿಯ ಅಧಿಕಾರಿಗಗಳೊಂದಿಗೆ ಮಧುರ ಬಾಂಧವ್ಯವನ್ನು ಇರಿಸಿಕೊಂಡು ಭಾರತ್ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಸಿಬಂದಿಗಳು ಮುಂದಾಗಬೇಕು ಎಂದು ನುಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು. ಗತ ವರ್ಷದಲ್ಲಿ ನಿಧನರಾದ ಸಹೋದ್ಯೋಗಿಗಳಿಗೆ ಸದಸ್ಯರು ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಸನಿಲ್ ಸ್ವಾಗತಿಸಿ, ಸಂಸ್ಥೆಯ ಧ್ಯೇಯ-ಧೋರಣೆಗಳ ಬಗ್ಗೆ ಮಾಹಿತಿ ನೀಡಿದರು. ಆಯ-ವ್ಯಯ ಮತ್ತು ಗತ ವಾರ್ಷಿಕ ಮಹಾಸಭೆಯ ವರದಿಯನ್ನು ಪುರುಷೋತ್ತಮ ಕೆ. ಪೂಜಾರಿ ವಾಚಿಸಿದರು.
ಸದಸ್ಯರಾದ ಕೇಂದ್ರ ಕಚೇರಿಯ ಸತೀಶ್ ಜೆ. ಬಂಗೇರ, ಭಾಂಡೂಪ್ ಶಾಖೆಯ ವಿಶ್ವನಾಥ್ ಅಮೀನ್, ವಸಾಯಿ ಶಾಖೆಯ ಅಭಿಷೇಕ್ ಅಮೀನ್, ವಿರಾರ್ ಶಾಖೆಯ ತೇಜಸ್ವಿ ಪೂಜಾರಿ, ಕೇಂದ್ರ ಕಚೇರಿಯ ನವೀನ್ ಪೂಜಾರಿ, ಉದಯ ಪೂಜಾರಿ, ಗಣೇಶ್ ಪೂಜಾರಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಆಯವ್ಯಯದ ಬಗ್ಗೆ ಬೊರಿವಲಿ ಪೂರ್ವ ಶಾಖೆಯ ದಿನೇಶ್ ಸಿ. ಸಾಲ್ಯಾನ್ ಸೂಚಿಸಿದರೆ, ಸತೀಶ್ ಜೆ. ಬಂಗೇರ ಅನುಮೋದಿಸಿದರು. ವರದಿಯನ್ನು ಸವೀಸ್ ಶಾಖೆಯ ಹೇಮಚಂದ್ರ ಪೂಜಾರಿ ಸೂಚಿಸಿದರೆ, ಗೋರೆಗಾಂವ್ ಪೂರ್ವ ಶಾಖೆಯ ಪ್ರಸನ್ನ ಬಂಗೇರ ಅನುಮೋದಿಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯ ಲೋಹಿತಾಕ್ಷ ಅಂಚನ್ ಪ್ರಾರ್ಥನೆ ಗೈದರು. ಜತೆ ಕೋಶಾಧಿಕಾರಿ ವಿಜಯ ವಿ. ಪಾಲನ್ ವಂದಿಸಿದರು. ಉಪಾಧ್ಯಕ್ಷರಾದ ಅಶೋಕ್ ಎಲ್. ಕೋಟ್ಯಾನ್, ಸದಸ್ಯರಾದ ರಾಘವೇಂದ್ರ ಪ್ರಸಾದ್ ಸಾಲ್ಯಾನ್, ಗಿರೀಶ್ ಸಾಲ್ಯಾನ್, ಶ್ರೀಧರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್