ಹೊಸದಿಲ್ಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ದೇಶಾ ದ್ಯಂತ ಸೋಮವಾರ 10 ಗಂಟೆಗಳ ಕಾಲ ಭಾರತ್ ಬಂದ್ ನಡೆಸಲಿದೆ.
ಭಾರತ್ ಬಂದ್ ವೇಳೆ ಕೇಂದ್ರ, ರಾಜ್ಯ ಸರಕಾರಿ ಕಚೇರಿಗಳು, ಮಾರುಕಟ್ಟೆಗಳು, ಅಂಗಡಿ-ಮುಂಗಟ್ಟುಗಳು, ಫ್ಯಾಕ್ಟರಿಗಳು, ಶಾಲೆ-ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದಾಗಿ ಮೋರ್ಚಾ ತಿಳಿಸಿದೆ. ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳನ್ನು ಹೊರತುಪಡಿಸಿ ಇತರ ಸರಕಾರಿ ಮತ್ತು ಖಾಸಗಿ ಸಾರಿಗೆಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದೂ ಹೇಳಿದೆ.
ಈಗಾಗಲೇ ಅನ್ನದಾತರು ಕರೆ ನೀಡಿರುವ ಭಾರತ್ ಬಂದ್‌ಗೆ ಕಾಂಗ್ರೆಸ್, ಆಪ್, ವೈಎಸ್ಸಾರ್ ಕಾಂಗ್ರೆಸ್, ಡಿಎಂಕೆ, ತೆಲುಗು ದೇಶಂ ಪಕ್ಷ, ಎಡಪಕ್ಷಗಳು, ಬಿಎಸ್‌ಪಿ, ಆರ್‌ಜೆಡಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸರಕಾರಗಳೂ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬೆಂಬಲ ಘೋಷಿಸಿವೆ. ಆಂಧ್ರ ಸರಕಾರವು ರವಿವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೆ ಎಪಿಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ: ಐಪಿಎಲ್: ಆರ್‌ಸಿಬಿಗೆ ಗೆಲುವಿನ ಹರ್ಷ
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವೂ ಬೆಂಬಲ ಘೋಷಿಸಿದ್ದು, ರೈತರೊಂದಿಗೆ ತಾವೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದೆ. ಇನ್ನೊಂದೆಡೆ, ವ್ಯಾಪಾರಿಗಳು, ಸಣ್ಣ ಉದ್ದಿಮೆಗಳು, ಮಳಿಗೆಗಳಿಗೂ ಬಂದ್‌ಗೂ ಸಂಬಂಧವಿಲ್ಲ ಎಂದು ಭಾರತೀಯ ಉದ್ಯೋಗ್ ವ್ಯಾಪಾರ್ ಮಂಡಲ್ ತಿಳಿಸಿದೆ.