Advertisement

ಭಾರತ್‌ ಬಂದ್‌ಗೆ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ

06:45 AM Apr 11, 2018 | Team Udayavani |

ನವದೆಹಲಿ: ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಜಾತಿ ಆಧಾರಿತ ಮೀಸಲು ನೀಡುವುದರ ವಿರುದ್ಧ ಕೆಲ ಸಂಘಟನೆಗಳು ಮಂಗಳವಾರ ಕರೆ ನೀಡಿದ ಭಾರತ್‌ ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರಗಳಲ್ಲಿ ಕೆಲ ಸಂಘಟನೆಗಳು ರೈಲು, ರಸ್ತೆ ತಡೆ ನಡೆಸಿದ್ದಾರೆ. ಬಿಹಾರದಲ್ಲಿ ನಡೆದ ಘರ್ಷಣೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಹಲವು ಪ್ರದೇಶಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಲಾಗಿದೆ.
ಒಂದು ವಾರದ ಅವಧಿಯಲ್ಲಿ ನಡೆದ ಎರಡನೇ ಭಾರತ್‌ ಬಂದ್‌ ಇದಾಗಿದೆ. ಏ.2ರಂದು ಎಸ್‌ಸಿ, ಎಸ್‌ಟಿ ಕಾಯ್ದೆ ಕುರಿತು ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ ನಡೆದ ಭಾರತ್‌ ಬಂದ್‌ನಲ್ಲಿ 9 ಮಂದಿ ಅಸುನೀಗಿದ್ದರು. ಹೀಗಾಗಿ ಸೋಮವಾರ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಸುತ್ತೋಲೆ ಹೊರಡಿಸಿತ್ತು.

Advertisement


ಬಿಹಾರ:
ಆರಾ ಪಟ್ಟಣದಲ್ಲಿ ಮೀಸಲು ಪರ ಮತ್ತು ವಿರೋಧಿ ಗುಂಪುಗಳ ನಡುವೆ ಬಡಿದಾಟದಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಪಾಟ್ನಾ, ಬೇಗುಸರೈ, ಲಖೀಸರೈ, ಮುಜಾಫ‌ರ್‌ಪುರ್‌, ಭೋಜ್‌ಪುರ್‌, ಶೇಖ್‌ಪುರ, ನವಾಡ ಮತ್ತು ದರ್ಭಾಂಗಗಳಲ್ಲಿ ಸಾವಿರಾರು ಮಂದಿ ರಸ್ತೆ, ರೈಲು ತಡೆ ನಡೆಸಿದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲೊಪ್ಪದವರನ್ನು ಬಲವಂತವಾಗಿ ಬಾಗಿಲು ಹಾಕಿಸಿದರು.

ರಾಜಸ್ಥಾನ: ರಾಜ್ಯ ಸರ್ಕಾರ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳ ಮೇಲೆ ನಿರ್ಬಂಧ ಹೇರಿತ್ತಲ್ಲದೆ, ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಏ.2ರಂದು ನಡೆದಿದ್ದ ಬಂದ್‌ ವೇಳೆ ಹಿಂಸಾಚಾರ ನಡೆದಿದ್ದ ಜಿಲ್ಲೆಗಳಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿತ್ತು. ಕಳೆದ ವಾರ ಮೊರೇನಾ ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ. ಬಿಎಸ್‌ಎಫ್, ಸಿಆರ್‌ಪಿಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ಕಳುಹಿಸಲಾಗಿದೆ. ಇದೇ ವೇಳೆ, ಕಳೆದ ವಾರ ಕರೆ ನೀಡಲಾಗಿದ್ದ ಬಂದ್‌ ವೇಳೆ, ಗುಂಡು ಹಾರಿಸಿಕೊಂಡಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ನವದೆಹಲಿಯಲ್ಲಿ ಅಸುನೀಗಿದ್ದಾರೆ.

ಮಧ್ಯಪ್ರದೇಶ: ರಾಜಧಾನಿ ಭೋಪಾಲದಲ್ಲಿ ಕೆಲ ಶಾಲೆಗಳ ಆಡಳಿತ ಮಂಡಳಿಗಳು ಶಾಲಾ ಬಸ್‌ ಸೇವೆ ರದ್ದು ಮಾಡಿದ್ದವು. ಕಳೆದ ವಾರದ ಬಂದ್‌ನಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದರಿಂದ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. 12 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಗ್ವಾಲಿಯರ್‌, ಚಂಬಲ್‌ ಪ್ರದೇಶದಲ್ಲಿ ಏ.15ರ ವರೆಗೆ 15 ಸಾವಿರ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಉತ್ತರ ಪ್ರದೇಶ: ಸಹರಾನ್ಪುರದಲ್ಲಿ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಮುಜಾಫ‌ರ್‌ನಗರ್‌, ಶಾಮ್ಲಿ ಮತ್ತು ಹಾಪುರ್‌ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜತೆಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆ ರದ್ದುಗೊಳಿಸಲಾಗಿದೆ. ಉಳಿದ ಭಾಗದಲ್ಲಿ ಜನಜೀವನ ಯಥಾಸ್ಥಿತಿಯಲ್ಲಿದೆ. ಉತ್ತರಾಖಂಡ ಎಲ್ಲಾ ಜಿಲ್ಲೆಗಳಲ್ಲಿಯೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Advertisement

ಪಂಜಾಬ್‌ ಲುಧಿಯಾನದಲ್ಲಿ ಕೆಲವರು ಬಲವಂತವಾಗಿ ಅಂಗಡಿ ಮತ್ತು ವಾಣಿಜ್ಯ ಮುಂಗಟ್ಟುಗಳನ್ನು ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next