ಹೊಸದಿಲ್ಲಿ : ಕೆಲವು ಸಮೂಹಗಳು ನಾಳೆ ಮಂಗಳವಾರ ಎಪ್ರಿಲ್ 10ರಂದು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಭದ್ರತೆಯನ್ನು ಬಿಗಿ ಗೊಳಿಸುವಂತೆ ಮತ್ತು ಅವಶ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಂದು ಸೋಮವಾರ ಸೂಚನೆ ನೀಡಿದೆ.
”ಎ.10ರಂದು ಇನ್ನೊಂದು ಭಾರತ್ ಬಂದ್ ನಡೆಯಲಿದೆ” ಎಂಬ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿರುವ ಕೇಂದ್ರ ಗೃಹ ಸಚಿವಾಲಯ, ಎಲ್ಲ ರಾಜ್ಯ ಸರಕಾರಗಳಿಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎ.2ರಂದು ದಲಿತ ಸಮೂಹಗಳಿಂದ ನಡೆದ ಭಾರತ್ ಬಂದ್ ನಲ್ಲಿ ವ್ಯಾಪಕ ಹಿಂಸೆ, ಆಸ್ತಿಪಾಸ್ತಿ ನಷ್ಟ ಸಂಭವಿಸಿರುವುದನ್ನು ಪ್ರತಿಭಟಿಸಲು, ಇನ್ನು ಕೆಲವು ಸಮೂಹಗಳು ಮೀಸಲಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಲು ಎ.10ರಂದು ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ತೋರಿ ಬಂದಿವೆ.
ರಾಜಸ್ಥಾನದಲ್ಲಿನ ವಿವಿದ ಸಮುದಾಯಗಳ ಪ್ರತಿನಿಧಿಗಳು ಭಿಲ್ವಾರಾ ದಲ್ಲಿನ ಜಿಲ್ಲಾಡಳಿತಕ್ಕೆ ಎ.10ರ ಭಾರತ್ ಬಂದ್ ಗೆ ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ.
ರಾಜಸ್ಥಾನದ ಕರ್ಣಿ ಸೇನಾ, ಜಾಟ್ ಸಮಾಜ್ ಸೇವಾ ಸಂಸ್ಥಾನ್ ಮತ್ತು ಅಖೀಲ ನಾರತೀಯ ಗುರ್ಜರ್ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಎ.10ರ ಭಾರತ್ ಬಂದ್ ಗೆ ತಮ್ಮ ಬೆಂಬಲ ಇಲ್ಲವೆಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.