ಟಿ.ಎಸ್. ನಾಗಾಭರಣ ನಿರ್ದೇಶನದ “ಅಲ್ಲಮ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಮುಂದಿನ ಶುಕ್ರವಾರ ಅಂದರೆ ಜವರಿ 26ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನಂತರ ನಾಗಾಭರಣ ಅವರ ಮುಂದಿನ ನಡೆಯೇನು, ಚಿತ್ರ ಯಾವುದು ಎಂದರೆ, ಒಮರ್ ಖಯ್ನಾಮ್ ಕುರಿತ ಚಿತ್ರ ಮಾಡುವುದಾಗಿ ಹೇಳುತ್ತಾರೆ ಅವರು.
10ನೇ ಶತಮಾನದ ವಿದ್ವಾಂಸ, ಗಣಿತಜ್ಞ, ಖಗೋಳಶಾಸ್ತ್ರಜ್ಞ, ಕವಿ ಮತ್ತು ಇನ್ನೂ ಏನೇನೋ ಆಗಿದ್ದ ಒಮರ್ ಖಯ್ನಾಮ್ ಅವರ ಕುರಿತಾದ ಚಿತ್ರವೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ ಮತ್ತು ಆ ಚಿತ್ರವನ್ನು ನಾಗಾಭರಣ ಅವರು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಆಶ್ಚರ್ಯವಾಗಬಹುದು.
ಎಲ್ಲಿಯ ಪರ್ಷಿಯಾ ಮತ್ತು ಒಮರ್ ಖಯ್ನಾಮ್ ಮತ್ತು ಎಲ್ಲಿಯ ಕನ್ನಡ ಚಿತ್ರರಂಗ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಇದು ಇತ್ತೀಚೆಗೆ ನಿಧನರಾದ ಉದ್ಯಮಿ ಮತ್ತು ನಿರ್ಮಾಪಕ ಹರಿ ಎಲ್ ಖೋಡೆ ಅವರ ಕನಸಾಗಿತ್ತು ಎನ್ನುತ್ತಾರೆ ನಾಗಾಭರಣ. ಇತ್ತೀಚೆಗೆ “ಅಲ್ಲಮ’ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ, “ಅಲ್ಲಮ’ ಚಿತ್ರದ ಬಿಡುಗಡೆಯಾಗುತ್ತಿರುವ ಬಗ್ಗೆ ಹೇಳುತ್ತಲೇ, ತಮ್ಮ ಮುಂದಿನ ಚಿತ್ರ ಒಮರ್ ಖಯ್ನಾಮ್ ಕುರಿತದ್ದಾಗಿರುತ್ತದೆ ಎಂದು ನಾಗಾಭರಣ ಹೇಳಿದರು.
“ಒಮರ್ ಖಯ್ನಾಮ್’ ನಮ್ಮ ಹರಿ ಯಜಮಾನರ (ಹರಿ ಎಲ್ ಖೋಡೆ) ಅವರ ಕನಸು. ಒಂದು ವರ್ಷದ ಹಿಂದೆಯೇ ಒಮರ್ ಖಯ್ನಾಮ್ ಕುರಿತ ಚಿತ್ರ ಮಾಡಬೇಕೆಂದು ಅವರು ಹೇಳಿದರು. “ಅಲ್ಲಮ’ ಮೊದಲು ಮುಗಿಯಲಿ, ಆ ನಂತರ ನೋಡೋಣ ಎಂದಿದ್ದೆ. ಈಗ “ಅಲ್ಲಮ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ “ಒಮರ್ ಖಯ್ನಾಮ್’ ಚಿತ್ರದ ಕುರಿತಾಗಿ ಹರಿ ಖೋಡೆ ಅವರ ಮಗ ಶ್ರೀನಿವಾಸ ಖೋಡೆ ನೆನಪಿಸಿದ್ದಾರೆ. ನಿಮ್ಮೆಲ್ಲರ ಸಮ್ಮುಖದಲ್ಲಿ ಈ ವಿಷಯವನ್ನು ಹೇಳುತ್ತಿದ್ದೀನಿ ಮತ್ತು ಅವರಿಗೂ ಕಮಿಟ್ ಮಾಡಿಸುತ್ತಿದ್ದೀನಿ’ ಎಂದು ನಾಗಾಭರಣ ಹೇಳಿದ್ದಾರೆ.