Advertisement

ಪಿನ್‌ಕೋಡ್‌ ಇಲ್ಲದಿದ್ರೆ ಪತ್ರ ವಿಲೇವಾರಿಗೆ ಪ್ರಾಬ್ಲಂ

12:42 PM Nov 14, 2019 | Naveen |

„ಎಚ್‌.ಬಿ. ನಿರಂಜನ ಮೂರ್ತಿ

Advertisement

ಭರಮಸಾಗರ: ಚಿತ್ರದುರ್ಗ ಜಿಲ್ಲೆಯ ಐದು ತಾಲೂಕುಗಳಲ್ಲಿ “ಓಬಳಾಪುರ’ ಎಂಬ ಒಂದೇ ಹೆಸರಿನ ಊರುಗಳಿದ್ದು, ಪಿನ್‌ಕೋಡ್‌ ನಮೂದಿಸದೇ ಬರೀ ಊರ ಹೆಸರು ನಮೂದಿಸುವುದರಿಂದ ಪತ್ರ ವಿಲೇವಾರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಅಂಚೆ ಇಲಾಖೆ ಮೂಲಕ ನಾನಾ ಇಲಾಖೆಗಳಿಗೆ ತಲುಪಬೇಕಾದ ಕಾಗದ ಪತ್ರಗಳು, ಸಾಮಾನ್ಯ ಪತ್ರಗಳು ಸಕಾಲದಲ್ಲಿ ತಲುಪದೆ “ಓಬಳಾಪುರ’ಗಳ ನಡುವೆ ಗಸ್ತು ಹೊಡೆಯುತ್ತಿದ್ದು, ಯಾರಿಗೆ ಸೇರಬೇಕೋ ಅವರಿಗೆ ತಲುಪುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಿವೆ.

ಹೊಳಲ್ಕೆರೆ ತಾಲೂಕು ಹೊರತುಪಡಿಸಿ ಚಿತ್ರದುರ್ಗ, ಚಳ್ಳಕೆರೆ , ಹೊಸದುರ್ಗ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳಲ್ಲಿ ತಲಾ ಒಂದೊಂದು “ಓಬಳಾಪುರ’ ಗ್ರಾಮಗಳಿವೆ. ಇದರಿಂದ ಪತ್ರ ವ್ಯವಹಾರ ನಡೆಸುವ ಜನರಿಗೆ ಸಮಸ್ಯೆಯಾಗಿದೆ. ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮಕ್ಕೆ ಪತ್ರ ಬರೆಯಬೇಕಿದ್ದರೆ ಪತ್ರ ತಲುಪಬೇಕಾದ ವಿಳಾಸ ಜತೆ ಕಡ್ಡಾಯವಾಗಿ ಇಲ್ಲಿನ ಪಿನ್‌ ಸಂಖ್ಯೆ 577541 ನಮೂದಿಸಿದರೆ ಆ ಪತ್ರ ಸಮಸ್ಯೆಯಿಲ್ಲದೆ ನೇರವಾಗಿ ಸೇರಬೇಕಾದವರ ಕೈ ಸೇರುತ್ತದೆ. ಆದರೆ ಪಿನ್‌ಸಂಖ್ಯೆ ದಾಖಲಿಸದೆ ಇರುವ ಪತ್ರಗಳು ವಿಳಾಸ ಕ್ರಮಬದ್ಧವಾಗಿದ್ದರೂ ಪಿನ್‌ ಸಂಖ್ಯೆ ಇಲ್ಲದೇ ಇರುವುದರಿಂದ ಜಿಲ್ಲೆಯ ಐದೂ ತಾಲೂಕುಗಳ ನಡುವೆ ಗಿರಕಿ ಹೊಡೆಯುವುದು ನಿಶ್ಚಿತ.

ಕೈ ಸೇರದ ಎಲ್‌ಐಸಿ ಬಾಂಡ್‌: ಶಿಕ್ಷಕರೊಬ್ಬರು ಎಲ್‌ಐಸಿಯಲ್ಲಿ ಸಾಲ ಪಡೆದು ಅದನ್ನು ಮರು ಪಾವತಿಸಿದ್ದರು. ಬಳಿಕ ಅವರ ಮೂಲ ಎಲ್‌ಐಸಿ ಬಾಂಡ್‌ ಅನ್ನು ಅಂಚೆ ಮೂಲಕ ಕಳುಹಿಸಿದ್ದೇವೆಂದು ಎಲ್‌ಐಸಿ ಅಧಿ ಕಾರಿಗಳು ತಿಳಿಸಿದ್ದರು. ಕಳುಹಿಸಿ ಒಂದು ತಿಂಗಳು ಕಳೆದರೂ ಬಾಂಡ್‌ ಸಿಕ್ಕಿರಲಿಲ್ಲ. ಎಲ್‌ಐಸಿ ಕಚೇರಿಗೆ ತೆರಳಿ ವಿಚಾರಿಸಿದಾಗ ಆ ಬಾಂಡ್‌ ಚಳ್ಳಕೆರೆ ತಾಲೂಕಿನ ಓಬಳಾಪುರ ತಲುಪಿದ್ದು ಗೊತ್ತಾಯಿತು.

ಮತ್ತೆ ಎಲ್‌ಐಸಿ ಕಚೇರಿ ಮೂಲಕವೇ ಮೂಲ ಬಾಂಡ್‌ ಅನ್ನು ಪಡೆಯಬೇಕಾಯಿತು. ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದ ಪತ್ರಗಳು ಪಿನ್‌ಸಂಖ್ಯೆ ಸಮಸ್ಯೆಯಿಂದ ಹೊಸದುರ್ಗ ತಾಲೂಕಿನ ಓಬಳಾಪುರ ಗ್ರಾಮಕ್ಕೆ ಹೋಗುತ್ತಿವೆ. ಅಲ್ಲಿ ಆ ವಿಳಾಸದ ವ್ಯಕ್ತಿ ಇಲ್ಲದೇ ಇರುವುದರಿಂದ ಪುನಃ ಜಿಲ್ಲಾ ಅಂಚೆ ಕಚೇರಿಯಿಂದ ಚಿತ್ರದುರ್ಗ ತಾಲೂಕಿನ ಓಬಳಾಪುರಕ್ಕೆ ಮರಳಿರುವ ಉದಾಹರಣೆಗಳಿವೆ. ಹೀಗೆ ಪತ್ರಗಳು ಅತ್ತಿಂದ ಇತ್ತ ಹೋಗಿ ತಲುಪುವ ವೇಳೆಗೆ ಕಾಲಹರಣವಾಗಿರುತ್ತದೆ.

Advertisement

ಓಬಳಾಪುರ ಹೆಸರಿನ ಗೊಂದಲದಿಂದ ಪ್ರತಿ ತಿಂಗಳು ಇಂತಹದ್ದೇ 20ಕ್ಕೂ ಹೆಚ್ಚು ಪ್ರಕರಣಗಳು ನಡೆಯುತ್ತಿವೆ. ಆಧಾರ್‌ ಕಾರ್ಡ್‌, ಶಾಲಾ ವರ್ಗಾವಣೆ ಪ್ರಮಾಣಪತ್ರ, ಎಲ್‌ಐಸಿ ಬಾಂಡ್‌, ಬ್ಯಾಂಕ್‌ ನೋಟಿಸ್‌ಗಳು, ಎಟಿಎಂ ಕಾರ್ಡ್‌, ಪ್ರಮುಖ ಪರೀಕ್ಷೆಗಳ ಪ್ರವೇಶ ಪತ್ರಗಳು, ಇತರೆ ಮಹತ್ವದ ದಾಖಲೆಗಳು ಕೈಸೇರಬೇಕಾದವರಿಗೆ ಸಕಾಲಕ್ಕೆ ಸೇರುತ್ತಿಲ್ಲ. ಜನರು ಅಂಚೆ ಸೇವೆ ಬಳಸುವ ವೇಳೆ ಪಿನ್‌ ಸಂಖ್ಯೆ ನಮೂದಿಸುವುದನ್ನು ಮರೆಯುತ್ತಿದ್ದಾರೆ. ಇದರಿಂದ ಇಂತಹ ಆವಾಂತರ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next