Advertisement

ಪಾಸ್‌ ಇದ್ದರೂ ನಿಲ್ಲಿಸುತ್ತಿಲ್ಲ ಸರ್ಕಾರಿ ಬಸ್‌!

12:47 PM Jan 09, 2020 | Naveen |

ಭರಮಸಾಗರ: ಬಸ್‌ ಸೌಕರ್ಯವಿದ್ದರೂ ಇಲ್ಲದವರಂತೆ ಶಾಲಾ ಮಕ್ಕಳು ರಸ್ತೆ ಬದಿ ನಿಂತು ಕೈ ಸನ್ನೆ ಮಾಡಿ ಮೂರು ಕಿ.ಮೀ ದೂರದ ಶಾಲಾ ಕಾಲೇಜುಗಳಿಗೆ ಹರಸಾಹಸಪಟ್ಟು ತೆರಳುವ ಸಮಸ್ಯೆ ಎದುರಾಗಿದೆ.

Advertisement

ಚಿತ್ರದುರ್ಗ ತಾಲೂಕಿನ ದ್ಯಾಪನಹಳ್ಳಿ ಗ್ರಾಮ ಭರಮಸಾಗರ- ಬಿಳಿಚೋಡು ಮುಖ್ಯ ರಸ್ತೆಯ ದ್ಯಾಪನಹಳ್ಳಿ ಗೇಟ್‌ನಿಂದ ಒಂದು ಕಿಮೀ ದೂರದಲ್ಲಿದೆ. ಗೇಟ್‌ನಿಂದ ಭರಮಸಾಗರಕ್ಕೆ ಮೂರು ಕಿಮೀ ದೂರವಿದೆ. ಒಟ್ಟಾರೆ ನಿತ್ಯ ನಾಲ್ಕು ಕಿಮೀ ಸಂಚರಿಸಿ ಶಾಲಾ-ಕಾಲೇಜುಗಳಿಗೆ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನಿತ್ಯ ಶಾಲಾ, ಕಾಲೇಜಿಗೆ ಹೊರಡುವ ವಿದ್ಯಾರ್ಥಿಗಳು 9 ಗಂಟೆಗೆ ಮನೆ ಬಿಟ್ಟು ಒಂದು ಕಿ.ಮೀ ದ್ಯಾಪನಹಳ್ಳಿ ಗೇಟ್‌ ಗೆ ನಡೆದು ಬರಬೇಕು. ಇಲ್ಲಿಗೆ ಬಂದ ಬಳಿಕ ಬೈಕ್‌, ಪ್ಯಾಸೆಂಜರ್‌, ಆಟೋ, ಗೂಡ್ಸ್‌ ಆಟೋ ಸೇರಿದಂತೆ ಎಲ್ಲ ಬಗೆಯ ವಾಹನಗಳು ನಿಲುಗಡೆ ನೀಡಿದರೆ ಹತ್ತಿಕೊಂಡು ಭರಮಸಾಗರ ಮುಟ್ಟಬೇಕು. ಈ ಹರಸಾಹಸ ಮುಗಿಸುವ ವೇಳೆಗೆ ಕೆಲ ವೇಳೆ ಸಮಯ 11 ಗಂಟೆ ಆಗಿರುತ್ತದೆ. ಶಿಕ್ಷಕರು ತಡವಾಗಿ ಬರುವುದಕ್ಕೆ ಹಲವು ಬಾರಿ ನಮಗೆ ವಾರ್ನ್ ಮಾಡಿದ್ದಾರೆ ಎನ್ನುತ್ತಾರೆ ಶಾಲಾ ಮಕ್ಕಳು.

ಕೆಎಸ್‌ಆರ್‌ಟಿಸಿ ಬಸ್‌ಗಳು ಇದ್ದು ಇಲ್ಲದಂತಾಗಿದೆ. ದ್ಯಾಪನಹಳ್ಳಿ ಗೇಟ್‌ನಿಂದ ಭರಮಸಾಗರ-ಬಿಳಿಚೋಡು ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚರಿಸುತ್ತವೆ. ಶಾಲಾ ಸಮಯಕ್ಕೆ ತಲುಪುವ ವೇಳೆಗೆ ಸರಿಯಾಗಿ 9ಗಂಟೆ, 9.30 ರ ಸಮಯದಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಬಹಳಷ್ಟು ಸಮಯದಲ್ಲಿ ಬಸ್‌ ಗಳು ನಿಲ್ಲಿಸುವುದಿಲ್ಲ. ಬಸ್‌ ತುಂಬಿರುತ್ತವೆ. ಪಾಸ್‌ ಮಾಡಿಸಿಯೂ ಉಪಯೋಗವಿಲ್ಲದಂತೆ ಆಗುತ್ತದೆ. ದ್ಯಾಪನಹಳ್ಳಿ ಗೇಟ್‌ನಿಂದ ಭರಮಸಾಗರಕ್ಕೆ ನಾಲ್ಕು ಕಿ.ಮೀ ದೂರಕ್ಕೆ ಕೆಎಸ್‌ ಆರ್‌ಟಿಸಿ ಬಸ್‌ನಲ್ಲಿ 9 ರೂ. ದರವಿದೆ. ಈ ದರ ಭರಮಸಾಗರದಿಂದ ಬಹದ್ದೂರ್‌ಘಟ್ಟದವರೆಗಿನ 8 ಕಿಮೀ ದೂರದ ದರದಷ್ಟೇ ಇದೆ. ಹೀಗಾಗಿ ಹಳ್ಳಿಗರು ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ತಿರುಗಿಯೂ ನೋಡುವುದಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಟೇಜ್‌ ಆಧರಿಸಿ ಬಸ್‌ ದರ ನಿಗದಿ ಮಾಡುವುದರಿಂದ ಇಲ್ಲಿನ ದರ ಹಳ್ಳಿಗರಿಗೆ ಹೆಚ್ಚು ಎಂಬ ಹಿನ್ನೆಲೆಯಲ್ಲಿ ಜನರು ಈ ಬಸ್‌ನತ್ತ ಧಾವಿಸುವುದಿಲ್ಲ.
ದ್ಯಾಪನಹಳ್ಳಿ ಗೇಟ್‌ನಿಂದ ಮೂರು ರೂ. ನೀಡಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತುಂಬಿದ ಆಟೋಗಳಲ್ಲಿ ನಿಂತುಕೊಂಡು ಸಂಚರಿಸಬೇಕಾಗುತ್ತದೆ. ಬೆಳಗಿನ ಈ ಸರ್ಕಸ್‌ ನಂತೆ ಸಂಜೆ ಕೂಡ ಮಕ್ಕಳು ಆಟೋ, ಬೈಕ್‌ಗಳಿಗೆ ಕೈ ಬೀಸಬೇಕು. ಇಲ್ಲವೆ ನಿಗದಿತ ಸಮಯಕ್ಕೆ ಹೊರಡುವ ಆಟೋಗಳಿಗೆ ಕಾಯ್ದು ನಿಲ್ಲಬೇಕು. ಬಸ್‌ ಪಾಸ್‌ ಮಾಡಿಸಿಯೂ ಪ್ರಯೋಜನವಿಲ್ಲ ಎಂಬ ಮನವರಿಕೆ ನಡುವೆ ಸಂಜೆಯ ಕೆಎಸ್‌ ಆರ್‌ಟಿಸಿ ಬಸ್‌ ಸೌಲಭ್ಯ ಕೂಡ ವಿದ್ಯಾರ್ಥಿಗಳ ಪಾಲಿಗೆ ನಿಲುಕದಂತಾಗಿದೆ.

ಬಸ್‌ ಸೌಕರ್ಯದ ಸಮಸ್ಯೆ ನಡುವೆ ಹೇಳಿ ಕೇಳಿ ವಿದ್ಯಾರ್ಥಿನಿಯರ ಗೋಳು ಹೇಳತೀರದು. ಇನ್ನದರೂ ಕೆಎಸ್‌ಆರ್‌ಟಿಸಿ ಇಲಾಖೆ ಸೇರಿದಂತೆ ಸಂಘ ಸಂಸ್ಥೆಗಳು ಮತ್ತು ಸರಕಾರ ಇಲ್ಲಿನ ವಿದ್ಯಾರ್ಥಿಗಳ ಸಂಚಾರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ದ್ಯಾಪನಹಳ್ಳಿ ಗ್ರಾಮಸ್ಥರ ಆಗ್ರಹವಾಗಿದೆ.

Advertisement

ಬಸ್‌ ಪಾಸ್‌ ಮಾಡಿಸಿದರೂ ದ್ಯಾಪನಹಳ್ಳಿ ಗೇಟ್‌ ಬಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ ಮಾಡುವುದಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ತುಂಬಿರದಿದ್ದರೆ ಕೆಲ ವೇಳೆ ನಿಲ್ಲಿಸುತ್ತಾರೆ. ಬಸ್‌ ಸಮಸ್ಯೆಯಿಂದ ನಮಗೆ ಶಾಲೆ, ಕಾಲೇಜಿಗೆ ಹೋಗಿ ಬರಲು ಸಮಸ್ಯೆ ಉಂಟಾಗುತ್ತಿದೆ. ನಮ್ಮೂರಿನ ಒಳಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು,
ದ್ಯಾಪನಹಳ್ಳಿ.

ದ್ಯಾಪನಹಳ್ಳಿ ಗೇಟ್‌ನಲ್ಲಿ ಬರುವ ವೇಳೆಗೆ ಬಸ್‌ಗಳು ಆ ಮಾರ್ಗದಲ್ಲಿ ತುಂಬಿರುವುದರ ಸಮಯದಲ್ಲಿ ಮಕ್ಕಳ ಸುರಕ್ಷತೆಗೆ ತೊಂದರೆ ಆಗುವ ಕಾರಣ ನಿಲ್ಲಿಸದೆ ಬಂದಿರಬಹುದು. ಉದ್ದೇಶ ಪೂರ್ವಕವಾಗಿ ನಿಲ್ಲಿಸದೆ ಬರುವುದಿಲ್ಲ. ಬಸ್‌ ದರ 9 ರೂ. ಇರುವುದನ್ನು ಕಡಿಮೆ ಮಾಡುವ ಸಂಬಂಧ ಗ್ರಾಮದವರು ಚಿತ್ರದುರ್ಗ, ದಾವಣಗೆರೆ ಕೆಎಸ್‌ಆರ್‌ಟಿಸಿಯ ಡಿಟಿಒಗಳಿಗೆ ಮನವಿ ಕೊಟ್ಟರೆ ಸಮಸ್ಯೆ ಪರಿಹಾರ ಆಗಬಹುದು. ಇನ್ನೂ ದ್ಯಾಪನಹಳ್ಳಿ ಗ್ರಾಮಕ್ಕೆ ಸಂಪರ್ಕ ಒದಗಿಸುವ ಸಂಬಂಧ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ನೀಡಬೇಕು.
ಶ್ರೀನಿವಾಸ್‌ ರೆಡ್ಡಿ,
ಕಂಟ್ರೋಲರ್‌, ಕೆಎಸ್‌ಆರ್‌ಟಿಸಿ, ಚಿತ್ರದುರ್ಗ

ಎಚ್‌.ಬಿ.ನಿರಂಜನಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next