ಭರಮಸಾಗರ: ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರ ಕೆ.ಬಳ್ಳೇಕಟ್ಟೆ ಸನಿಹದ ಕಾತ್ರಾಳು ಕೆರೆಗೆ ತೀವ್ರ ಕಾಯಿಲೆಯಿಂದ ಸತ್ತಿರುವ 300 ಕ್ಕೂ ಹೆಚ್ಚು ಬಾಯ್ಲರ್ ಕೋಳಿಗಳನ್ನು ಸನಿಹದ ಕೋಳಿ ಫಾರಂನವರು ಬೇಜಬ್ದಾರಿಯಿಂದ ಬಿಸಾಡಿರುವ ಘಟನೆ ನಡೆದಿದೆ.
ಕಾತ್ರಾಳು ಕೆರೆಯನ್ನು ತುಂಗಭದ್ರಾ ನದಿ ನೀರನ್ನು ಹರಿಸಿ ತುಂಬಿಸಲಾಗಿದೆ. ನೀರಿನಿಂದ ತುಂಬಿರುವ ಕೆರೆಗೆ ಸತ್ತ ಕೋಳಿಗಳನ್ನು ಬೇಜವಬ್ದಾರಿಯಿಂದ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಐದಕ್ಕೂ ಹೆಚ್ಚು ಕೋಳಿ ಫಾರಂಗಳಿಂದ ಬಿಸಾಡಿರುವ ಕೋಳಿ ಫಾರಂಗಳ ಮಾಲಕರ ವಿರುದ್ಧ ಇದೀಗ ಕೆ.ಬಳ್ಳೇಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮೊದಲೇ ಮಳೆ ಇಲ್ಲದೆ ಬರ ತಾಂಡವಾಡುತ್ತಿದೆ. ಜನ ಮತ್ತು ಜಾನುವಾರು, ವನ್ಯ ಜೀವಿಗಳ ಕುಡಿಯುವ ನೀರಿನ ಆಶ್ರಯವಾಗಿರುವ ಕೆರೆಗೆ ಹೀಗೆ ಸತ್ತ ರೋಗಗ್ರಸ್ಥ ಕೋಳಿಗಳನ್ನು ಎಸೆಯುವ ಮೂಲಕ ಕೆರೆಯ ನೀರನ್ನು ವಿಷಯುಕ್ತ ಮಾಡಲಾಗಿದೆ.ಅಲ್ಲದೆ ಸತ್ತ ಕೋಳಿಗಳನ್ನು ಬಿಸಾಡಿರುವ ಸನಿಹದಲ್ಲೇ ಕೆ.ಬಳ್ಳೇಕಟ್ಟೆ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸುವ ಬೋರ್ ವೆಲ್ ಗಳು ಕಾರ್ಯ ನಿರ್ವಹಿಸುತ್ತಿವೆ. ಕುಡಿಯುವ ನೀರು ವಿಷಯುಕ್ತ ಆದರೆ ಮುಂದೇನು ಗತಿ ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಇತ್ತ ಕಾಕತಾಳೀಯ ಎಂಬಂತೆ ಗ್ರಾಮದಲ್ಲಿ ಬಾಲಕಿಯೊರ್ವಳು ತೀವ್ರ ಜ್ವರ ಇತರೆ ರೋಗ ಲಕ್ಷಣಗಳಿಂದ ಬಳಲುತ್ತಿದ್ದು ಆಸ್ಪತ್ರೆಯ ಐಸಿಯು ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರತಿ ವರ್ಷ ಐದಾರು ಕೋಳಿ ಫಾರಂಗಳಿಂದ ನೊಣಗಳ ಕಾಟ ಬೇರೆ. ಹೈವೇ ಗೆ ಹೊಂದಿಕೊಂಡ ಡಾಬಾಗಳು ಕೂಡ ನೊಣಗಳ ಕಾಟಾದಿಂದ ನಲಗುತ್ತವೆ. ಪ್ರತಿವರ್ಷ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜನರು ಹೈರಾಣವಾಗಿದ್ದಾರೆ.
ಈ ಬಗ್ಗೆ ಗ್ರಾಪಂಗಳಿಗೆ ಅನೇಕ ಬಾರಿ ದೂರು ನೀಡಿದ್ದರು ಪ್ರಯೋಜನವಾಗಿಲ್ಲ. ಈ ನಡುವೆ ಕೆರೆಗಳ ಇರುವಿಕೆ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ಹೀಗೆ ಕೋಳಿಗಳನ್ನು ಎಸೆದಿರುವ ಕೋಳಿ ಫಾರಂಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಕೂಡಲೇ ಘಟನೆಗೆ ಕಾರಣರಾದವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಕೆ.ಬಳ್ಳೇಕಟ್ಟೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
112 ಗಸ್ತು ಪೊಲೀಸರು ಕೆರೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸಂಬಂಧಿಸಿದವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.