Advertisement

ಕಸದ ತೊಟ್ಟಿಯಾಯ್ತು ಕೆರೆ!

01:09 PM Feb 19, 2020 | Naveen |

ಭರಮಸಾಗರ: ಇಲ್ಲಿನ ಐತಿಹಾಸಿಕ ಚಿಕ್ಕಕೆರೆ ಗ್ರಾಮದ ಕಸ ತ್ಯಾಜ್ಯ ವಿಲೇವಾರಿ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಬೇವಿನಹಳ್ಳಿ, ಬಿಳಿಚೋಡು ಕಡೆಯಿಂದ ಭರಮಸಾಗರ ಗ್ರಾಮವನ್ನು ಪ್ರವೇಶಿಸುವ ಮಾರ್ಗದಲ್ಲಿರುವ ಕೆರೆ ವ್ಯಾಪ್ತಿ ಪ್ರದೇಶ ದುರ್ವಾಸನೆ ಬೀರುತ್ತಿದೆ.

Advertisement

ಕೆರೆಯ ಸುತ್ತಳತೆ ನಿರ್ಧರಿದುವ ಮೊದಲು ಕೆರೆಗೆ ಹೊಂದಿಕೊಂಡ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯನ್ನು ಸುರಿಯುವುದು ಸಾಮಾನ್ಯವಾಗಿತ್ತು. ಇದೀಗ ಕೆರೆ ವ್ಯಾಪ್ತಿಯನ್ನು ಗುರುತಿಸಿ ದೊಡ್ಡ ಏರಿಯನ್ನು ನಿರ್ಮಿಸಿದ ಬಳಿಕ ಕೆರೆಯಿಂದ ಸುಮಾರು 100 ಅಡಿಗಳಿಗಿಂತಹೆಚ್ಚು ಉಳಿದಿರುವ ಬೇವಿನಹಳ್ಳಿ ಗ್ರಾಮಕ್ಕೆ ಹೋಗುವ ಕೆರೆಯ ಮೂಲೆ ಪ್ರದೇಶದಲ್ಲಿ ಮನೆಗಳನ್ನು ಕೆಡವಿದ ಹಾಳು ಮಣ್ಣು ಹಾಗೂ ಇತರೆ ಕಸದ ತ್ಯಾಜ್ಯ ತಂದು ಸುರಿದಿರುವ ಕಾರಣ ಈ ಪ್ರದೇಶ ತ್ಯಾಜ್ಯದಲ್ಲಿ ಮುಳುಗಿ ಹೋಗಿದೆ. ಕೆರೆ ಇರುವಿಕೆಯನ್ನು ಗುರುತಿಸುತ್ತಿದ್ದ ನಾಲ್ಕು ಅಡಿ ಎತ್ತರದ ಗೋಡೆ ಬರಹ ಮತ್ತು ಸಣ್ಣ ನೀರಾವರಿ ಇಲಾಖೆಗೆ ಸೇರಿದ ನಾಮಫಲಕವನ್ನು ಕೈಬಿಟ್ಟು ಸುಮಾರು 200 ಅಡಿ ದೂರದಲ್ಲಿ ಕೆರೆ ಏರಿ ನಿರ್ಮಿಸಿದ ಬಳಿಕವಂತೂ ಇಲ್ಲಿನ ಪ್ರದೇಶ ಅಕ್ಷರಶಃ ಡಂಪಿಂಗ್‌ ಯಾರ್ಡ್‌ ನಂತಾಗಿಬಿಟ್ಟಿದೆ.

ಕೆರೆಗೆ ಹೊಂದಿಕೊಂಡ ಗೋಡೆ ಮೇಲೆ ಬರೆಯಲಾದ ಚಿಕ್ಕಕೆರೆ ಕುರಿತ ಮಾಹಿತಿ ನಾಮಫಲಕವನ್ನು ಕೆರೆ ಏರಿ ಬಳಿ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಡುವೆ ಕೆರೆ ಏರಿ ರಸ್ತೆಯ ಬೇವಿನಹಳ್ಳಿ ಮೂಲೆ ಮತ್ತು ದಾವಣಗೆರೆ ರಸ್ತೆ ಮಾರ್ಗದ ಕೆರೆ ಏರಿಗಳಲ್ಲಿ ಎಲ್ಲೆಂದರಲ್ಲಿನ ಕಸವನ್ನೆಲ್ಲ ಸುರಿದು ಕೆರೆಯನ್ನು ಕಶ್ಮಲಗಳ ಆಗರವನ್ನಾಗಿಸಲಾಗುತ್ತಿದೆ.

ಕಟ್ಟಡಗಳ ಹಾಳು ಮಣ್ಣು, ಕೋಳಿ ತ್ಯಾಜ್ಯ, ಸಲೂನ್‌ ಶಾಪ್‌ಗ್ಳ ಕೂದಲು, ಅವಧಿ ಮೀರಿದ ಮೆಡಿಸಿನ್‌ಗಳು, ರಾಸಾಯನಿಕ ಔಷ ಧ ಬಾಟಲ್‌ ಗಳು, ಗುಟ್ಕಾ ಕವರ್‌ಗಳು, ಮದ್ಯದ ಬಾಟಲಿಗಳು, ಪೌಚ್‌ಗಳು, ಕಟ್ಟಡಗಳ ಸಿಮೆಂಟ್‌ ಪಳೆಯುಳಿಕೆಗಳು, ನಾನಾ ವಾಣಿಜ್ಯ ವ್ಯಾಪಾರ ಚಟುವಟಿಕೆಗಳಿಂದ ಬರುವ ಕಸದೊಂದಿಗೆ ಕೊಳೆಯದೇ ಇರುವ ಇತರೆ ಪದಾರ್ಥಗಳನ್ನು ತಂದು ರಾಶಿ ಹಾಆಕಲಾಗುತ್ತಿದೆ. ತ್ಯಾಜ್ಯದಿಂದ ಕೆರೆಯ ಏರಿ ಅಂಚುಗಳು ಕೊಳೆತು ನಾರುತ್ತಿದೆ. ಗಿಡ ಗಂಟೆಗಳನ್ನು ಕತ್ತರಿಸದೇ ಇರುವುದರಿಂದ ಕೆರೆ ಅಂಚಿನ ಪ್ರದೇಶ ತನ್ನ ಸೌಂದರ್ಯವನ್ನೇ ಕಳೆದುಕೊಂಡಿದೆ. ಒಂದೆಡೆ ಕೆರೆಗೆ ನೀರು ತುಂಬಿಸು
ಯೋಜನೆ ಕಾಮಗಾರಿ ನಡೆಯುತ್ತಿದ್ದರೆ, ಮತ್ತೊಂದೆಡೆ ಕೆರೆಯನ್ನು ಕಸದ ತೊಟ್ಟಿಗಳಂತೆ ಬಳಕೆ ಮಾಡುತ್ತಿರುವುದು ಮಾತ್ರ ವಿಪರ್ಯಾಸ.

ಗಂಭೀರ ಕಾಯಿಲೆಗಳ ಮೂಲವಾದೀತು ಕಸ!
ಕಳೆದ ಹಲವು ವರ್ಷಗಳಿಂದ ಕೆರೆಯಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್‌ ಹಾಗೂ ಭೂಮಿಯಲ್ಲಿ
ಕೊಳೆಯದೇ ಇರುವ ವಸ್ತುಗಳಿಂದ ನೀರು ಭೂಮಿಯಲ್ಲಿ ಇಂಗುವ ತನ್ನ ನೈಜ ಸಾಮರ್ಥ್ಯವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕಸ ತ್ಯಾಜ್ಯದ ಪರಿಣಾಮಗಳನ್ನು ಲೆಕ್ಕಿಸದೇ ಇರುವ ಕಾರಣ ಮುಂಬರುವ ದಿನಗಳಲ್ಲಿ ಕೆರೆಯಲ್ಲಿ ಸಂಗ್ರಹವಾಗುವ ಕಸ, ಗಂಭೀರ ಕಾಯಿಲೆಗಳ ಮೂಲವಾಗಿ ಜನರನ್ನು ಕಾಡಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಜಲ ತಜ್ಞರು.

Advertisement

ಎಚ್‌.ಬಿ. ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next