Advertisement

ಕೋಳಿ ಗೊಬ್ಬರಕ್ಕೆ ಫುಲ್‌ ಡಿಮ್ಯಾಂಡ್‌

11:35 AM Dec 23, 2019 | Naveen |

ಎಚ್‌.ಬಿ. ನಿರಂಜನ ಮೂರ್ತಿ
ಭರಮಸಾಗರ:
ಪ್ರಸಕ್ತ ವರ್ಷ ರಾಜ್ಯದಲ್ಲಿ ದಾಖಲೆ ಮಳೆ ಆಗಿದೆ. ಈ ಹಿನ್ನೆಲೆಯಲ್ಲಿ ಅಡಕೆ, ತೆಂಗು, ಬಾಳೆ ಸೇರಿದಂತೆ ಪ್ರಮುಖ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಪೋಷಕಾಂಶ ಒದಗಿಸುವ ಹಾಗೂ ಅಧಿಕ ಇಳುವರಿ ನೀಡುವ ಕೋಳಿ ಗೊಬ್ಬರಕ್ಕೆ ಭಾರೀ ಬೇಡಿಕೆ ಬಂದಿದೆ.

Advertisement

ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿ 4ರ ಆಸುಪಾಸಿನಲ್ಲಿರುವ ಕೋಳಿ ಫಾರಂಗಳಿಂದ ನಿತ್ಯ ನೂರಾರು ಟನ್‌ ಕೋಳಿ ಗೊಬ್ಬರವನ್ನು ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ಖರೀದಿಸಿ ಲಾರಿ, ಟ್ರ್ಯಾಕ್ಟರ್‌ಗಳ ಮೂಲಕ ಒಯ್ಯುತ್ತಿರುವುದು ಕಂಡು ಬರುತ್ತಿದೆ. ಕಳೆದ ವರ್ಷ ಮಳೆಯಿಲ್ಲದ ಕಾರಣ ಟನ್‌ ಕೋಳಿ ಗೊಬ್ಬರಕ್ಕೆ 1600 ರೂ. ದರ ಇತ್ತು. ಈ ವರ್ಷ ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಗಳಲ್ಲಿ ದಾಖಲೆ ಮಳೆ ಸುರಿದ ಹಿನ್ನೆಲೆಯಲ್ಲಿ ಕೋಳಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಹೀಗಾಗಿ ಟನ್‌ಗೆ 1900 ರೂ. ಬೆಲೆ ಇದೆ. ಟ್ರ್ಯಾಕ್ಟರ್‌ಗೆ 8 ರಿಂದ 10 ಟನ್‌ ಗೊಬ್ಬರ ತುಂಬಲಾಗುತ್ತದೆ. ಒಂದು ಲೋಡ್‌ ಗೊಬ್ಬರಕ್ಕೆ 15 ಸಾವಿರ ರೂ. ಹಾಗೂ ಸಾಗಾಣಿಕೆ ವೆಚ್ಚ ಸೇರಿ ಬರೋಬ್ಬರಿ 20 ಸಾವಿರ ರೂ. ಆಗುತ್ತದೆ.

ಒಣ ಗೊಬ್ಬರಕ್ಕೆ ಬೇಡಿಕೆ ಜಾಸ್ತಿ:  ಭರಮಸಾಗರ ಹತ್ತಿರದ ರಾಷ್ಟ್ರೀಯ ಹೆದ್ದಾರಿ 4ರ ಕೊಳಹಾಳ್‌, ಬೀರಾವರ, ಕೆ.ಬಳ್ಳೇಕಟ್ಟೆ, ದಾವಣಗೆರೆ ತಾಲೂಕಿನ ಹೆಬ್ಟಾಳು, ಆನಗೋಡು, ಹಾಲುವರ್ತಿ ಭಾಗಗಳಿಂದ ನಿತ್ಯ ನೂರಾರು ಟನ್‌ ಕೋಳಿ ಗೊಬ್ಬರವನ್ನು ಅವಳಿ ಜಿಲ್ಲೆಯ ನಾನಾ ಭಾಗಗಳು ಸೇರಿದಂತೆ ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳಿಗೂ ಗೊಬ್ಬರ ಸಾಗಾಟವಾಗುತ್ತಿದೆ. ಹಸಿ ಕೋಳಿ ಗೊಬ್ಬರಕ್ಕಿಂತ ಒಣ ಗೊಬ್ಬರಕ್ಕೆ ಹೆಚ್ಚು ದರ ನೀಡಿ ರೈತರು ಖರೀದಿಸುತ್ತಾರೆ. ಪ್ರತಿ ವರ್ಷ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿನ ಕೋಳಿ ಫಾರಂಗಳಿಂದ ಗೊಬ್ಬರ ಖರೀದಿ ಸಾಮಾನ್ಯವಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಮಳೆ ಕಡಿಮೆ ಆಗಿ ತೋಟಗಳೇ ಉಳಿಯುವುದಿಲ್ಲ ಎಂಬ ಮಟ್ಟಿಗೆ ನೀರಿಗೆ ಹಾಹಾಕಾರ ಎದುರಾಗಿತ್ತು. ಆದರೆ ಈ ವರ್ಷದ ಮಳೆ ಹಿಂದಿನ ನೋವನ್ನು ಮರೆಸಿದೆ. ಸಮೃದ್ಧವಾದ ನೀರಿನ ಲಭ್ಯತೆ ಹಿನ್ನೆಲೆಯಲ್ಲಿ ಇದೀಗ ರೈತರು ತೋಟದ ಬೆಳೆಗಳ ಕಸುವು ಹೆಚ್ಚಿಸಲು ಗಮನ ನೀಡಿದ್ದಾರೆ ಎಂದು ಹೊಳಲ್ಕೆರೆ ತಾಲೂಕಿನ ರಂಗಾಪುರ ಗ್ರಾಮದ ಅಡಕೆ ಬೆಳೆಗಾರರೊಬ್ಬರು ಹೇಳುತ್ತಾರೆ. ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ಸೇರಿದಂತೆ ಚಿತ್ರದುರ್ಗದ ಹಲವು ಭಾಗಗಳಲ್ಲಿ ಈ ಬಾರಿ ರೈತರು ಈರುಳ್ಳಿ ಬೆಳೆಯಿಂದ ಬಂಪರ್‌ ಲಾಭ ಗಳಿಸಿದ್ದಾರೆ.

Advertisement

ಪ್ರತಿ ವರ್ಷ ಈ ಭಾಗದ ರೈತರು ಕೋಳಿ ಗೊಬ್ಬರ ಖರೀದಿಸುವುದು ವಾಡಿಕೆ. ಈರುಳ್ಳಿ ತಂದ ಸಡಗರದ ನಡುವೆ ಮುಂಬರುವ ವರ್ಷದ ಬೆಳೆ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಬೆಳೆಗಾರರು ಕೋಳಿ ಗೊಬ್ಬರ ಖರೀದಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ನಾನಾ ತೋಟಗಾರಿಕೆ ಮತ್ತು ತರಕಾರಿ ಬೆಳೆಗಳಿಗೆ ಈ ಗೊಬ್ಬರವನ್ನು ಬಳಕೆ ಮಾಡಲಾಗುತ್ತದೆ. ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಚಿತ್ರದುರ್ಗ, ದಾವಣಗೆರೆ ಭಾಗದ ಕೋಳಿ ಫಾರಂಗಳು ಕೋಳಿ ಗೊಬ್ಬರ ಪೂರೈಸುತ್ತಿವೆ. ಚಿತ್ರದುರ್ಗದ ಕೆಲವು ಗಡಿ ಗ್ರಾಮಗಳ ರೈತರು ಕಡಿಮೆ ದರಕ್ಕೆ ದೊರೆಯುತ್ತದೆ ಎಂಬ ಹಿನ್ನೆಲೆಯಲ್ಲಿ ಪಕ್ಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ಕೋಳಿ ಫಾರಂಗಳಿಂದ ಗೊಬ್ಬರ ಖರೀದಿ ಮಾಡುವುದು ಸಾಮಾನ್ಯವಾಗಿದೆ.

ಕೃಷಿ ತಜ್ಞರ ಸಲಹೆ ಪಾಲಿಸಿ: ವೈಜ್ಞಾನಿಕವಾಗಿ ನೋಡುವುದಾದರೆ ಕೋಳಿ ಗೊಬ್ಬರ ಅತ್ಯುತ್ತಮ ಸಾವಯವ ವಸ್ತುವಾಗಿದೆ. ಇದರಿಂದ ಮಣ್ಣಿನಲ್ಲಿ ಗರಿಷ್ಠ ಜೈವಿಕ ಪ್ರಕ್ರಿಯೆಗಳನ್ನು ನಡೆಸಬಹುದು. ಜಮೀನಿನ ಹಲವು ಫಸಲುಗಳಿಗೆ ನೇರವಾಗಿ ಕೋಳಿ ಗೊಬ್ಬರ ಬಳಸುವುದರಿಂದ ಬೆಳೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇದರಲ್ಲಿನ ಆಮ್ಲ, ಹಸಿರು ಪೈರನ್ನು ಸುಟ್ಟು ಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಬಳಕೆ ಮಾಡುವ ಕೋಳಿ ಗೊಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ
ಉಪಯೋಗಿಸಿದರೆ ಒಳಿತು ಎಂಬ ಕೃಷಿ ತಜ್ಞರ ಸಲಹೆಯನ್ನು ಪಾಲಿಸಲು ರೈತರು ಮುಂದಾಗಬೇಕಿದೆ.

ಬಳಕೆ ಮಾಡುವಾಗ ಇರಲಿ ಎಚ್ಚರ
ಕೋಳಿ ಗೊಬ್ಬರ ಬಳಕೆಯಿಂದ ಮುಖ್ಯವಾಗಿ ಅಡಕೆ ಮರಗಳಿಗೆ ಕಾಣಿಸಿಕೊಳ್ಳುವ ಸುಳಿ ರೋಗ ನಿಯಂತ್ರಣವಾಗುತ್ತದೆ. ಗಿಡವೊಂದಕ್ಕೆ 5 ರಿಂದ 6 ಕೆಜಿ ಯಷ್ಟು ಗೊಬ್ಬರ ಅಗತ್ಯ. ಹೆಚ್ಚು ತೇವಾಂಶವನ್ನು ನಿರೀಕ್ಷಿಸುವ ಕೋಳಿ ಗೊಬ್ಬರವನ್ನು ನೀಡಿದ ಬಳಿಕ ಸಾಕಷ್ಟು ನೀರುಣಿಸಬೇಕು.ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಅಡಕೆ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ನಿಶ್ಚಿತ. ಹಾಗಾಗಿ ಕೋಳಿ ಗೊಬ್ಬರ ಬಳಕೆ ಮಾಡುವಾಗ ರೈತರು ಎಚ್ಚರ ವಹಿಸುವುದು ಒಳಿತು.

ಕೋಳಿ ಗೊಬ್ಬರ ಬಳಕೆಯಿಂದ ತೋಟದ ಬೆಳೆಗಳಲ್ಲಿ ಗರಿಷ್ಠ ಪ್ರಮಾಣದ ಇಳುವರಿ ಪಡೆದಿರುವುದು ಸೇರಿದಂತೆ ರೋಗ ಬಾಧೆಯನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿರುವುದು ನಮಗೆ ಮನವರಿಕೆ ಆಗಿದೆ. ಅಲ್ಲದೆ ಈ ವರ್ಷ ಹೊಳಲ್ಕೆರೆ, ಹೊಸದುರ್ಗ ಭಾಗದಲ್ಲಿ ದಾಖಲೆ ಮಳೆ ಸುರಿದಿದೆ. ಕೊಳವೆಬಾವಿಗಳಲ್ಲಿ, ಕೆರೆಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ನೀರಿನ ಉತ್ತಮ ಲಭ್ಯತೆ ನಡುವೆ ಅಧಿಕ ಉಷ್ಣಾಂಶ ಹೊಂದಿರುವ ಕೋಳಿ ಗೊಬ್ಬರವನ್ನು ಹೆಚ್ಚು ಪೂರೈಸಿ ತೋಟಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ.
ಹನುಮಂತರಾಯಪ್ಪ, 
ಕೋಳಿ ಗೊಬ್ಬರ ಬಳಕೆದಾರರು, ತಾಳ್ಯ

Advertisement

Udayavani is now on Telegram. Click here to join our channel and stay updated with the latest news.

Next