Advertisement

ಗಿಡ-ಮರಗಳ ಗೋಳು ಕೇಳ್ಳೋರ್ಯಾರು?

01:21 PM Jan 01, 2020 | Naveen |

ಭರಮಸಾಗರ: ಇಲ್ಲಿನ ಅಕ್ಕಮಹಾದೇವಿ ಪ್ರೌಢಶಾಲೆಯಿಂದ ಬಿಳಿಚೋಡು ಕಡೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿನ ಬೇವು, ಹುಣಸೆ ಇತರೆ ಸಾಲು ಮರಗಳಡಿ ಅಡಕೆ ಸಿಪ್ಪೆ, ಇತರೆ ಕಸದ ತ್ಯಾಜ್ಯವನ್ನು ಮರಗಳಡಿ ಸುರಿಯಲಾಗುತ್ತಿದೆ. ಅಲ್ಲದೆ ಮರಗಳ ಬುಡದಲ್ಲಿ ಬೆಂಕಿ ಹಾಕುವ ಮೂಲಕ ಹಸಿರು ಮರಗಳ ಮಾರಣಹೋಮ ನಡೆಸಲಾಗುತ್ತಿದೆ.

Advertisement

ಈಗಾಗಲೇ ಇಲ್ಲಿನ ರಸ್ತೆ ಇಕ್ಕೆಲಗಳಲ್ಲಿನ ಮರಗಳಡಿ ಟ್ರ್ಯಾಕ್ಟರ್‌ಗಳ ಮೂಲಕ ತಂದ ಅಡಕೆ ಸಿಪ್ಪೆಯನ್ನು ಕಳೆದ ತಿಂಗಳಿನಿಂದ ಸುರಿಯಲಾಗುತ್ತಿದೆ. ಇದೀಗ ಸಿಪ್ಪೆ ಸೇರಿದಂತೆ ಸ್ಥಳೀಯರು ಬಿಸಾಡುವ ಕಸ ಸೇರಿ ಒಣಗಿದ ಕಸಕ್ಕೆ ಬೆಂಕಿ ಹಚ್ಚುವ ಪ್ರವೃತ್ತಿ ಶುರುವಾಗಿದೆ.

ಸೋಮವಾರ ಇಡೀ ದಿನ ಇಲ್ಲಿನ ಹುಣಸೆ ಮರದ ಬುಡದಲ್ಲಿ ಬೆಳಿಗ್ಗೆ 9 ಗಂಟೆ ವೇಳೆ ಕಿಡಿಗೇಡಿಗಳು ಹಚ್ಚಿದ ಬೆಂಕಿ ಸಂಜೆ 5ರವರೆಗೂ ಹೊತ್ತಿ ಉರಿದಿದೆ. ಇದರಿಂದ ಹುಣಸೆ ಮರದ ಬುಡ ಸುಟ್ಟು ಹೋಗಿದೆ.

ಅಲ್ಲದೆ ಉತ್ತಮ ಮಳೆಯಿಂದ ಸಮೃದ್ಧ ಹಸಿರಿನಿಂದ ಕಂಗೊಳಿಸುತ್ತಿದ್ದ ಮರದ ರೆಂಬೆ ಕೊಂಬೆಗಳಲ್ಲಿನ ಹಸಿರೆಲೆಗಳು ತರಗಲೆಗಳಂತೆ ಬೆಂಕಿಯ ಜಳಕ್ಕೆ ಉದುರಿದರೆ ಮೇಲ್ಭಾಗದ ರೆಂಬೆ ಕೊಂಬೆಗಳು ಸುಟ್ಟಂತಾಗಿವೆ. ಇಕ್ಕೆಲಗಳಲ್ಲಿ 100ಕ್ಕೂ ಹೆಚ್ಚು ಮರಗಳು ದ್ಯಾಪನಹಳ್ಳಿ ಕ್ರಾಸ್‌ ವರೆಗೆ ಬೆಳೆದು ಸಂಚಾರದಲ್ಲಿ ಒಂದಷ್ಟು ಹಸಿರು ವಾತಾವರಣ ಉಳಿದು ಸವಾರರ ಕಣ್ಮನ ಸೆಳೆಯುವ ಈ ಮರಗಳಿಗೆ ಅಡಕೆ ಸಿಪ್ಪೆ ಸೇರಿದಂತೆ ಕಸದ ರಾಶಿ ಬಂದು ಮರಗಳಡಿ ಬೀಳುತ್ತಿದೆ. ಒಣಗಿದ ಬಳಿಕ ಮರಗಳಡಿ ಬೆಂಕಿ
ಹಚ್ಚುವುದು ಕಂಡುಬರುತ್ತಿದೆ. ಇಲ್ಲಿನ ಮರ ಒಂದರ ಬಳಿ ಬೆಂಕಿ ತಗುಲಿ ಮರ ಸುಡುತ್ತಿರುವುದನ್ನು ತಡೆದು ಇಲ್ಲಿನ ಸಾಲು ಮರಗಳ ರಕ್ಷಣೆಗೆ ಧಾವಿಸುವಂತೆ ಜಿಲ್ಲಾ ಅರಣ್ಯ ಇಲಾಖೆಯ ಡಿಎಫ್‌ಒ ಅವರಿಗೂ ಮಾಹಿತಿ ನೀಡಲಾಗಿತ್ತು. ಅವರು ಈ ಬಗ್ಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದರು.

ಬಳಿಕ ಅರಣ್ಯ ಇಲಾಖೆ ರೇಂಜರ್‌ ರುದ್ರಮುನಿ ಎಂಬುವರು ಕರೆ ಮಾಡಿ ಯಾವ ಸ್ಥಳದಲ್ಲಿ ಮರದ ಬಳಿ ಬೆಂಕಿ ಹಚ್ಚಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದು ಬಿಟ್ಟರೆ ಸಂಜೆ 5ಗಂಟೆ ಬಳಿಕವೂ ಮರದ ಬಳಿ ಹಾಕಲಾಗಿದ್ದ ಅಡಕೆ ಸಿಪ್ಪೆ ತ್ಯಾಜ್ಯದಿಂದ ಹೊಗೆ ಬರುತ್ತಲೇ ಇತ್ತು. ಮರಗಳಡಿ ಈಗಾಗಲೇ ಸುರಿದಿರುವ ಕಸದ ತ್ಯಾಜ್ಯಕ್ಕೆ ಬರುವ ದಿನಗಳಲ್ಲಿ ಬೆಂಕಿ ಹಾಕುವುದು ಗ್ಯಾರಂಟಿ. ರಕ್ಷಣೆಗೆ ಧಾವಿಸಬೇಕಾದ ಅರಣ್ಯ ಮತ್ತು ಲೋಕೋಪೋಯೋಗಿ ಇಲಾಖೆ ಅಧಿಕಾರಿಗಳು ಎಚ್ಚೇತ್ತುಕೊಳ್ಳದೆ ಇರುವುದು ವಿಪರ್ಯಾಸ.

Advertisement

ಮರಗಳಡಿ ಕಸದ ರಾಶಿಯನ್ನು ಸುರಿದು ಬೆಂಕಿ ಹಚ್ಚುವ ಪ್ರವೃತ್ತಿ ಒಳ್ಳೇಯದಲ್ಲ. ಈಗಾಗಲೇ ಹೈವೇ ಇಕ್ಕೆಲಗಳಲ್ಲಿ ಹಾಗೂ ಭರಮಸಾಗರ ಮುಖ್ಯ ರಸ್ತೆಯ ಮರಗಳನ್ನು ರಸ್ತೆ ಅಗಲೀಕರಣದಡಿ ಕಡಿದು ಹಾಕಲಾಗಿದೆ. ಇತ್ತ ಬಿಳಿಚೋಡು ರಸ್ತೆಯಲ್ಲಿನ ಅಳಿದುಳಿದ ಮರಗಳನ್ನು ಬೆಂಕಿ ಹಾಕಿ ಸುಡುತ್ತಿರುವುದು ಘೋರ ಅನ್ಯಾಯ. ಮರಗಳ ರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಧಾವಿಸಬೇಕು. ಮರಗಳಡಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯೋತ್ಸವ,
ಭರಮಸಾಗರ.

ಮರದಡಿ ಬಿದ್ದ ಬೆಂಕಿಯನ್ನು ನಮ್ಮ ಮೋಟಿವೇಟರ್‌ನ್ನು ಸ್ಥಳಕ್ಕೆ ಕಳುಹಿಸಿ ಅವರ ಮೂಲಕ ನಂದಿಸಲಾಗಿದೆ. ಮರಳಡಿ ಬಿದ್ದ ಕಸ ತ್ಯಾಜ್ಯವನ್ನು ತೆಗೆಸಲಾಗುತ್ತದೆ.
ರುದ್ರಮುನಿ, ರೇಂಜರ್‌,
ಅರಣ್ಯ ಇಲಾಖೆ.

„ಎಚ್‌.ಬಿ. ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next