Advertisement

ಅನೈರ್ಮಲ್ಯದ ಗೂಡಾದ ಆಟೋ ನಿಲ್ದಾಣ

07:06 PM Mar 19, 2020 | Naveen |

ಭರಮಸಾಗರ: ಇಲ್ಲಿನ ಸಂತೆ ಮೈದಾನದ ಬಳಿಯ ಆಟೋ ನಿಲ್ದಾಣ (ತಂಗುದಾಣ) ಪ್ರಯಾಣಿಕರ ಪಾಲಿಗೆ ತಂಗಲು ಯೋಗ್ಯವಾಗಿಲ್ಲದೆ ಅನೈರ್ಮಲ್ಯದ ಗೂಡಾಗಿದೆ.

Advertisement

ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್‌ ವತಿಯಿಂದ ನಿರ್ಮಿಸಲಾಗಿರುವ ಈ ನಿಲ್ದಾಣ, ಕಟ್ಟಿದ ಬಳಿಕ ಇದರ ನಿರ್ವಹಣೆ ಕಡೆ ಗಮನಹರಿಸದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಅನೈರ್ಮಲ್ಯ ಹೆಚ್ಚುತ್ತಲೇ ಇದೆ. ಇದೇನು ನಿಲ್ದಾಣವೋ ಹಾಳು ಕೊಂಪೆಯೋ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕನಿಷ್ಠ ಸುಣ್ಣ ಬಣ್ಣವೂ ಇಲ್ಲದೆ ಗ್ರಾಮದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಬಿಳಿಚೋಡು ಮುಖ್ಯ ರಸ್ತೆಯ ಸಂತೆ ಮೈದಾನಕ್ಕೆ ಹೊಂದಿಕೊಂಡಿರುವ ಈ ನಿಲ್ದಾಣದಲ್ಲಿ ಕಸ, ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಸುರಿದ ಕಸದೊಳಗೆ ಬೆಂಕಿ ಹಚ್ಚಿ ಸುಡುವ ಪರಿಪಾಠ ಕೆಲ ತಿಂಗಳುಗಳಿಂದ ಶುರುವಾಗಿದೆ. ಅಲ್ಲದೆ ಕೆಲವು ಮಾನಸಿಕ ಅಸ್ವಸ್ಥರು, ಬುದ್ದಿಮಾಂದ್ಯರು ತಂಗುವ ನಿಲ್ದಾಣವಾಗಿದೆ. ನಾಯಿಗಳು, ಹಂದಿಗಳು ಇದರೊಳಗೆ ಹೋಗಿ ಬಂದು ಗಲೀಜು ಹೆಚ್ಚಿಸಿವೆ. ಇದರ ಅಕ್ಕಪಕ್ಕದಲ್ಲಿನ ಚರಂಡಿಗಳ ಕಾರಣ ಸೊಳ್ಳೆಗಳ ಆಗರವಾಗಿದೆ. ಇದರ ಗೋಡೆಗಳ ತುಂಬ ನಾನಾ ಬೀಜ ಕಂಪನಿಗಳು, ಸಿನಿಮಾ ವಾಲ್‌ಪೋಸ್ಟರ್‌ಗಳು ರಾರಾಜಿಸುತ್ತಿವೆ. ಎಲೆ ಅಡಕೆ, ಗುಟ್ಕಾ ಅಗಿದು ಉಗಿದಿರುವ ಕುರುಹುಗಳು ಕಂಡು ಬರುತ್ತವೆ. ಮಳೆಗಾಲದಲ್ಲಿ ನಿಲ್ಲುವ ನೀರಿನಿಂದ ಗೋಡೆಗಳ ಮೇಲೆ ಹುಲ್ಲು ಬೆಳೆದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ. ಸಂಬಂಧಿಸಿದವರು ಆಟೋ ನಿಲ್ದಾಣದ ಸ್ವಚ್ಛತೆಗೆ ಗಮನ ನೀಡಿ ಜನರ ಬಳಕೆಗೆ ಒದಗಿಸಲು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next