ಭರಮಸಾಗರ: ಜಿಲ್ಲೆಯಲ್ಲಿ ದಾಖಲೆ ಮಳೆ ಸುರಿದರೆ, ಐತಿಹಾಸಿಕ ದೊಡ್ಡಕೆರೆ ಮತ್ತು ಚಿಕ್ಕಕೆರೆ ಎಂದೇ ಖ್ಯಾತಿ ಪಡೆದ ಜೋಡಿ ಕೆರೆಗಳಿಗೆ ಇದುವರೆಗೆ ಮಳೆ ನೀರು ಹರಿದು ಬಂದಿಲ್ಲ. ಇದರಿಂದ ಎರಡು ಕೆರೆಗಳು ಭಣಗುಟ್ಟುತ್ತಿವೆ. 2011ರಲ್ಲಿ ಸಮೃದ್ಧ ಮಳೆಯಾಗಿ ಕೆರೆ ತುಂಬಿ ಕೋಡಿ ಬಿದ್ದಿತ್ತು. ಬಳಿಕ ಕೆರೆಯ ಕೋಡಿ ಎತ್ತರವನ್ನು ಒಂದುವರೆ ಅಡಿ ಹೆಚ್ಚಿಸಲಾಯಿತು. ಆ ಬಳಿಕ ಎಂಟು ವರ್ಷಗಳು ಕಳೆದರೂ ಕೆರೆಗೆ ನೀರು ಬಂದಿಲ್ಲ. ಈ ವರ್ಷದ ದಾಖಲೆ ಮಳೆಯಾದರೂ ಕೆರೆಗೆ ನೀರು ಬಾರದೆ ಇರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.
Advertisement
ಹಲವು ಐತಿಹ್ಯಗಳ ಗಣಿ ಆಗಿರುವ ಇಲ್ಲಿನ ದೊಡ್ಡಕೆರೆ ಮತ್ತು ಚಿಕ್ಕ ಕೆರೆಗಳು ಪ್ರಾಕೃತಿಕ ಸೊಬಗಿನಿಂದ ಕಣ್ಮನ ಸೆಳೆಯಬೇಕಾಗಿತ್ತು. ಆದರೆ ಬರೀ ಜಾಲಿ ಗಿಡಗಳ ಪ್ರದೇಶವಾಗಿ ಮಾರ್ಪಟ್ಟಿದೆ. ಕೆರೆ ಪುನರ್ ನಿರ್ಮಾಣ ಮತ್ತು ಸಂರಕ್ಷಣೆ ಯೋಜನೆಯಡಿ ಕೆರೆ ಸುತ್ತ ಟ್ರಂಚ್ ನಿರ್ಮಾಣ ಮತ್ತು ಸುಮಾರು 10 ಅಡಿ ಎತ್ತರದವರೆಗೆ ಸುತ್ತ ಕಲ್ಲಿನ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಳೆದ 8-9 ವರ್ಷಗಳಲ್ಲಿ ಉತ್ತಮ ಮಳೆಯಿಲ್ಲದೆ ಕೆರೆಗಳು ಖಾಲಿಯಾಗಿ ಅಂತರ್ಜಲ ಪಾತಾಳ ತಲುಪಿದೆ. ಇದರಿಂದಾಗಿ ಅಡಿಕೆ, ಬಾಳೆ, ತೆಂಗು ತೋಟಗಳ ಬೆಳೆಗಾರರು ಟ್ಯಾಂಕರ್ ನೀರು ಪೂರೈಸಿ ತೋಟಗಳನ್ನು ಉಳಿಸುವ ಭಗೀರಥ ಸಾಹಸ ಮಾಡಿ ನಷ್ಟ ಎದುರಿಸಿದ್ದರು.
Related Articles
Advertisement
230 ಎಕರೆ ವಿಸ್ತಾರದ ದೊಡ್ಡಕೆರೆ 800 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ಒಟ್ಟಾರೆ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಲ್ಲಿ ಅಬ್ಬರಿಸಿದ ಮಳೆಗೆ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಅದೇ ಮಾದರಿಯಲ್ಲಿ ಚಿತ್ರದುರ್ಗ ತಾಲೂಕಿನ ಭರಮಸಾಗರದ ಕೆರೆ-ಕಟ್ಟೆಗಳು ತುಂಬುತ್ತವೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.